ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಐಟಿ ಕ್ಷೇತ್ರದ ಟ್ರೆಂಡಿಂಗ್ ಕೋರ್ಸ್ ಯಾವುದು ? 1. ನಾನು ಬಿಕಾಂ ಮುಗಿಸಿ ಎಂಕಾಂ ಸೇರಿದ್ದೇನೆ ಮತ್ತು ಎಂಎಸ್‌ಡಬ್ಲ್ಯು ಮಾಡುತ್ತಿದ್ದೇನೆ. ಈ ಕೋರ್ಸ್ ನಂತರ ಯಾವ ವೃತ್ತಿಯನ್ನು ಮಾಡಬಹುದು? ಸಲಹೆ ನೀಡಿ. ಹೆಸರು, ಊರು ತಿಳಿಸಿಲ್ಲ ಫೈನಾನ್ಸ್ ವಿಸ್ತಾರವಾದ ಕ್ಷೇತ್ರ. ಅಕೌಂಟಿಂಗ್, ಬ್ಯಾಂಕಿಂಗ್, ಇನ್ಶ್ಯೂರೆನ್ಸ್, ಇನ್ವೆಸ್ಟ್‌ಮೆಂಟ್, ಕಾರ್ಪೊರೇಟ್ ಫೈನಾನ್ಸ್, ರಿಸರ್ಚ್, ರಿಸ್ಕ್ ಮ್ಯಾನೇಜ್‌ಮೆಂಟ್ ಸೇರಿದಂತೆ ಅನೇಕ ವಿಭಾಗಗಳಿವೆ. ಹಾಗಾಗಿ, ಈ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ವೃತ್ತಿಯನ್ನು ರೂಪಿಸಿಕೊಳ್ಳಬಹುದು. ಎಂಎಸ್‌ಡಬ್ಲ್ಯು ಮುಗಿಸಿದ ನಂತರ ಫೈನಾನ್ಸ್ ಕ್ಷೇತ್ರದ ಮಾನವ ಸಂಪನ್ಮೂಲ ಸಂಬಂಧಿತ ಜವಾಬ್ದಾರಿಗಳನ್ನೂ ನಿಭಾಯಿಸುವ ಅರ್ಹತೆಯೂ ಇರುತ್ತದೆ. ಹಾಗೂ, ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ಸರ್ಕಾರಿ ಕೆಲಸಗಳಿಗೂ ಪ್ರಯತ್ನಿಸಬಹುದು. ನಿಮ್ಮ ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆಯ ಆಧಾರದ ಮೇಲೆ ವೃತ್ತಿಯೋಜನೆಯನ್ನು ಮಾಡಿ, ಅದಕ್ಕೆ ಅನುಗುಣವಾಗಿ ಮುಂದಿನ ವೃತ್ತಿಯ ಆಯ್ಕೆ ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: ://../----/ 2. ನಾನು ಇಂಗ್ಲಿಷ್ ಶಿಕ್ಷಕ. 2013 ರಿಂದ ಕೊಪ್ಪಳದ ಸರ್ಕಾರಿ ಶಾಲೆಯಲ್ಲಿ ವೃತ್ತಿ ಮಾಡುತ್ತಿದ್ದೇನೆ. 2004 ರಲ್ಲಿ ನಾನು ಪ್ರೈಮರಿ ಶಾಲಾ ಶಿಕ್ಷಕನಾಗಿ ನೇಮಕಗೊಂಡಿದ್ದೆ. 2008–09 ರಲ್ಲಿ ರೆಗ್ಯುಲರ್ ಬಿಇಡಿ ಕೋರ್ಸ್ ಸೇರಿದ್ದೆ. ಅದೇ ವರ್ಷದಲ್ಲಿ ನಾನು ಖಾಸಗಿಯಾಗಿ ಇಂಗ್ಲಿಷ್ ಎಂ.ಎ ಪೂರೈಸಿದ್ದೆ. ನಾನು, ಈಗ ಪಿಯು ಕಾಲೇಜಿನಲ್ಲಿ ಅಧ್ಯಾಪಕನಾಗಲು ಸಾಧ್ಯವೇ? ಹೆಸರು, ಊರು ತಿಳಿಸಿಲ್ಲ ನಮಗಿರುವ ಮಾಹಿತಿಯಂತೆ, ಪಿಯು ಕಾಲೇಜು ಅಧ್ಯಾಪಕರಾಗಲು, ಸಾಮಾನ್ಯ ವರ್ಗದವರಾದರೆ 40 ವರ್ಷದ ಒಳಗಿದ್ದು, ಬಿ.ಇಡಿ ಪದವಿಯ ಜೊತೆಗೆ ಬೋಧಿಸುವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು. ಹೆಚ್ಚಿನ ವಿವರಗಳಿಗಾಗಿ ಗಮನಿಸಿ: ://../---/ 3. ನಾನು ಎಂಬಿಎ ಮುಗಿಸಿ ಎಂಎನ್‌ಸಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದೇನೆ. ನನಗೆ ಸಾಫ್ಟ್‌ವೇರ್‌ ಕೋರ್ಸ್ ಮಾಡುವ ಆಸೆ. ಆದರೆ ನನಗೆ ಯಾವ ಕೋರ್ಸ್ ಸೂಕ್ತ ಹಾಗೂ ಸದ್ಯ ಐಟಿ ಕ್ಷೇತ್ರದಲ್ಲಿ ಟ್ರೆಂಡಿಂಗ್ ಇರುವ ಕೋರ್ಸ್ ಯಾವುದು ಎಂಬುದು ತಿಳಿಯುತ್ತಿಲ್ಲ. ಈ ವಿಷಯದಲ್ಲಿ ನನಗೆ ಸಹಾಯ ಮಾಡಿ. ಬೆಳಕು, ಮಂಡ್ಯ ಕೃತಕ ಬುದ್ಧಿಮತ್ತೆ (ಎಐ) ಮತ್ತು ರೊಬೊಟಿಕ್ಸ್ ಈಗ ಬೇಡಿಕೆಯಲ್ಲಿರುವ ಹಾಗೂ ಭವಿಷ್ಯದಲ್ಲೂ ಬೇಡಿಕೆಯನ್ನು ನಿರೀಕ್ಷಿಸಬಹುದಾದ ಕ್ಷೇತ್ರ. ರೊಬೊಟಿಕ್ಸ್, ಕಂಪ್ಯೂಟರ್ ಸೈನ್ಸ್, ಆರ್ಟಿಫಿಷಿಯಲ್ ಎಂಜಿನಿಯರಿಂಗ್, ಮೆಷಿನ್ ಲರ್ನಿಂಗ್ ಇತ್ಯಾದಿ ವಿಷಯಗಳ ಕುರಿತು ಡಿಪ್ಲೊಮಾ/ಸರ್ಟಿಫಿಕೇಟ್ ಕೋರ್ಸ್ ಮಾಡಿ ಈ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. 4. ನನ್ನ ತಂದೆ-ತಾಯಿಯವರ ದಾಖಲೆಗಳಲ್ಲಿ ಮತ್ತು ನನ್ನ ಪದವಿಯವರೆಗಿನ ದಾಖಲೆಗಳಲ್ಲಿ ಅವರಿಬ್ಬರ ಹೆಸರುಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಇದರಿಂದ ಸರ್ಕಾರಿ ಉದ್ಯೋಗಕ್ಕೆ ದಾಖಲಾತಿ ಪರಿಶೀಲನೆಯ ವೇಳೆಯಲ್ಲಿ ತೊಂದರೆಯಾಗುತ್ತದೆಯೇ ತಿಳಿಸಿ? ಒಂದು ವೇಳೆ ಹಾಗಾದರೆ, ಸರಿಪಡಿಸಿಕೊಳ್ಳುವ ಬಗ್ಗೆ ತಿಳಿಸಿ. ಸಂದೀಪ್, ಹೊಸದುರ್ಗ. ನಮಗಿರುವ ಮಾಹಿತಿಯಂತೆ ನಿಮ್ಮ ತಂದೆತಾಯಿಯವರ ಹೆಸರುಗಳಲ್ಲಿರುವ ಅಲ್ಪಸ್ವಲ್ಪ ವ್ಯತ್ಯಾಸಗಳಿಂದ ನಿಮ್ಮ ಉದ್ಯೋಗದ ದಾಖಲಾತಿ ಪರಿಶೀಲನೆಯ ಸಮಯದಲ್ಲಿ ತೊಂದರೆಯಾಗಲಾರದು. ಆದರೆ, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಅವರ ಹೆಸರುಗಳನ್ನು ನಿಮ್ಮ ದಾಖಲೆಗಳಲ್ಲಿರುವಂತೆ ನಮೂದಿಸುವುದು ಉತ್ತಮ. ಹಾಗೂ, ಅಗತ್ಯ ಬಿದ್ದರೆ, ಲೋಪದೋಷಗಳ ಕುರಿತು ಪ್ರಮಾಣಪತ್ರವನ್ನು ಸಲ್ಲಿಸಬಹುದು. 5. ನಾನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಮಾಡುತ್ತಿದ್ದೇನೆ. ಪದವಿಯ ನಂತರ ಎಂಬಿಎ ಮಾಡಬಹುದೇ ಅಥವಾ ಯಾವ ವೃತ್ತಿ ನನಗೆ ಸರಿಯಾದ ಆಯ್ಕೆಯಾಗಿರುತ್ತದೆ. ಸಾಯಿಕುಮಾರ್, ಊರು ತಿಳಿಸಿಲ್ಲ. ಬಿಎ ಪದವಿಯ ನಂತರ ಎಂಬಿಎ ಮಾಡಬಹುದು. ನಿಮ್ಮ ಅಭಿರುಚಿ ಮತ್ತು ಆಸಕ್ತಿಯಂತೆ ವೃತ್ತಿ ಯೋಜನೆಯನ್ನು ಮಾಡಿ ಅದಕ್ಕೆ ಅನುಗುಣವಾಗಿ ವೃತ್ತಿಯನ್ನು ಅನುಸರಿಸಿ. ವೃತ್ತಿಜೀವನವನ್ನು ರುಪಿಸಿಕೊಳ್ಳುವ ಮಾರ್ಗದರ್ಶನಕ್ಕಾಗಿ ಈ ವೀಡಿಯೊ ವೀಕ್ಷಿಸಿ: ://../?=MHnPg_sp6E0 6. ಈಗ, ನಾನು ಪಿಯುಸಿ (ಕಲಾ ಸಂಯೋಜನೆ) ಕೋರ್ಸ್ ಅನ್ನು ಖಾಸಗಿಯಾಗಿ ಮುಗಿಸಿದ್ದು, ಇದು ಕಾನ್‌ಸ್ಟೇಬಲ್ ಹುದ್ದೆಗೆ ಅರ್ಹತೆಯಾಗುತ್ತದೆಯೇ? ಚಂದ್ರು ಹಿರೇಮಠ, ಹೇರೂರು. ಪಿಯುಸಿ ಅಥವಾ ತತ್ಸಮಾನ ಕೋರ್ಸ್ ಕಾನ್‌ಸ್ಟೇಬಲ್ ಹುದ್ದೆಗೆ ಅರ್ಹತೆಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: ://./--#cpc_e 7. ನಾನು ಎಂಎಸ್‌ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದು, ಸಿವಿಲ್ ಕಾನ್‌ಸ್ಟೇಬಲ್‌ ಹುದ್ದೆಗೆ ಆಯ್ಕೆಯಾಗಿರುತ್ತೇನೆ. ಈ ಹುದ್ದೆಯಲ್ಲಿದ್ದುಕೊಂಡು ರೆಗ್ಯುಲರ್ ಪದವಿ ಪಡೆಯಲು ಅವಕಾಶವಿದೆಯೇ? ರವಿ, ಜಾಲಹಳ್ಳಿ. ನಮಗಿರುವ ಮಾಹಿತಿಯಂತೆ ಸರ್ಕಾರಿ ಹುದ್ದೆಯಲ್ಲಿದ್ದುಕೊಂಡು ಈಗ ಮಾಡುತ್ತಿರುವ ರೆಗ್ಯುಲರ್ ಎಂಎಸ್‌ಸಿ ಕೋರ್ಸ್ ಅನ್ನು ಮುಂದುವರೆಸಲಾಗುವುದಿಲ್ಲ. ಆದರೆ, ದೂರ ಶಿಕ್ಷಣದ ಮುಖಾಂತರ ಎಂಎಸ್‌ಸಿ ಕೋರ್ಸ್ ಅನ್ನು ಆಯ್ದ ಕೆಲವು ಸಂಯೋಜನೆಗಳಲ್ಲಿ ಓದುವ ಅವಕಾಶವಿದೆ. 8. ದೂರ ಶಿಕ್ಷಣದ ಮೂಲಕ ಎಂಎಸ್‌ಸಿ ಹಾಗೂ ರೆಗ್ಯೂಲರ್ ಬಿಇಡಿ ಕೋರ್ಸ್‌ಗಳನ್ನು ಏಕಕಾಲಕ್ಕೆ ಕಲಿಯಬಹುದೇ? ಮಲ್ಲಿಕಾರ್ಜುನ ಗಂಗಣ್ಣನವರ್, ಊರು ತಿಳಿಸಿಲ್ಲ. ನಮಗಿರುವ ಮಾಹಿತಿಯಂತೆ, ಈ ಎರಡೂ ಕೋರ್ಸ್‌ಗಳನ್ನು ಏಕಕಾಲಕ್ಕೆ ಕಲಿಯುವ ಸಾಧ್ಯತೆಯಿದೆ. ನಿಖರವಾದ ಮಾಹಿತಿಗಾಗಿ ಸಂಬಂಧಪಟ್ಟ ವಿಶ್ವವಿದ್ಯಾಲಯದಲ್ಲಿ ವಿಚಾರಿಸಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.