ಐಪಿಎಲ್‌: ಮುಂಬೈನಲ್ಲಿ ತಂಡಗಳ ತಾಲೀಮಿಗೆ ಅವಕಾಶ ಮುಂಬೈ: ಮುಂಬೈನಲ್ಲಿ ಐಪಿಎಲ್‌ ತಂಡಗಳ ತಾಲೀಮಿಗೆ ಸೋಮವಾರದಿಂದ ಅವಕಾಶ ಮಾಡಿಕೊಡಲಾಗಿದೆ.ವಾಂಖೆಡೆ ಕ್ರೀಡಾಂಗಣದಲ್ಲಿ ರಾತ್ರಿ 8 ಗಂಟೆಯ ನಂತರ ಆಟಗಾರರಿಗೆ ಅಭ್ಯಾಸ ನಡೆಸಲು ಮಹಾರಾಷ್ಟ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ರಾತ್ರಿ ಕರ್ಪ್ಯೂ ಅವಧಿಯಲ್ಲಿ ತಾವು ತಂಗಿರುವ ಹೊಟೇಲ್‌ಗಳನ್ನು ಸೇರಿಕೊಳ್ಳಬೇಕೆಂದೂ ತಿಳಿಸಿದೆ. ನಗರದಲ್ಲಿ ಸೋಮವಾರ ಸಂಜೆಯಿಂದ ಕೋವಿಡ್‌ ತಡೆ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಯಿತು. ‘ಬಯೋ-ಬಬಲ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆನ್ನುವ ಸೂಚನೆಯೊಂದಿಗೆ ರಾಜ್ಯ ಸರ್ಕಾರವು ಐಪಿಎಲ್ ತಂಡಗಳಿಗೆ ಅಭ್ಯಾಸ ಮಾಡಲು ಅವಕಾಶ ಕಲ್ಪಿಸಿದೆ. ‘ಪಂದ್ಯಗಳು ನಡೆಯುವ ಸಮಯವನ್ನು ಪರಿಗಣಿಸಿ, ಸಿಸಿಐ ಹಾಗೂ ಎಂಸಿಎ ಕ್ರೀಡಾಂಗಣಗಳಲ್ಲಿ ತಂಡಗಳು ಎರಡು ಅವಧಿಯಲ್ಲಿ (ಸಂಜೆ 4ರಿಂದ 6.30 ಹಾಗೂ ರಾತ್ರಿ 7.30ರಿಂದ 10 ಗಂಟೆಯವರೆಗೆ) ತಾಲೀಮು ನಡೆಸಬಹುದು‘ ಎಂದು ರಾಜ್ಯ ಸರ್ಕಾರದ ವಿಪತ್ತು ನಿರ್ವಹಣೆ, ಪರಿಹಾರ ಹಾಗೂ ಪುನರ್ವಸತಿ ಇಲಾಖೆಯ ಸಹಾಯಕ ಕಾರ್ಯದರ್ಶಿ ಶ್ರೀರಂಗ ಗೋಲಪ್ ಅವರು ಬಿಸಿಸಿಐಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಮುಂಬೈ, ಐಪಿಎಲ್‌ನ 10 ಪಂದ್ಯಗಳನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸಲಿದ್ದು, ಅವುಗಳಲ್ಲಿ ಒಂಬತ್ತು ಪಂದ್ಯಗಳು ಸಂಜೆ 7.30ಕ್ಕೆ ಪ್ರಾರಂಭವಾಗಲಿವೆ. ಏಪ್ರಿಲ್ 10ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ವಾಂಖೆಡೆಯಲ್ಲಿ ಮೊದಲ ಪಂದ್ಯ ನಡೆಯಲಿದೆ. ನಗರದಲ್ಲಿ ಭಾನುವಾರ 11,000ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ದಾಖಲಾಗಿದ್ದವು. ಕೋವಿಡ್‌ ‘ನೆಗೆಟಿವ್‌‘: ವಾಂಖೆಡೆ ಕ್ರೀಡಾಂಗಣದ ಹತ್ತು ಮಂದಿ ಸಿಬ್ಬಂದಿಗೆ ಈ ಹಿಂದೆ ಕೋವಿಡ್ ದೃಢಪಟ್ಟಿತ್ತು. ಈಗ ಅವರೆಲ್ಲರ ವರದಿ ‘ನೆಗೆಟಿವ್‘ ಬಂದಿದೆ ಎಂದು ತಿಳಿದುಬಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.