ಐಪಿಎಲ್ 2021‌: ಬೆಳಕಿನ ಚಿತ್ತಾರದಲ್ಲಿ ರಾಯಲ್ಸ್ ಜೆರ್ಸಿ ಬಿಡುಗಡೆ ಜೈಪುರ: ಇಲ್ಲಿನ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಬೆಳಕಿನ ಚಿತ್ತಾರ ಮೂಡಿದಾಗ ಹೋಟೆಲ್‌ ಕೊಠಡಿಗಳಲ್ಲಿ ಕುಳಿತಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ಮತ್ತು ವಿಶ್ವದಾದ್ಯಂತ ಇರುವ ಅಭಿಮಾನಿಗಳು ಪುಳಕಗೊಂಡರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡದ ಪೋಷಾಕು ಬಿಡುಗಡೆ ಸಮಾರಂಭವನ್ನು ರಾಯಲ್ಸ್ ಅದ್ದೂರಿಯಾಗಿ ಆಯೋಜಿಸಿತ್ತು. ಇಡೀ ಕ್ರೀಡಾಂಗಣವನ್ನು ಬಳಸಿ ತ್ರಿ–ಡಿ ಪ್ರೊಜೆಕ್ಟರ್‌ನಲ್ಲಿ ಬಣ್ಣಬಣ್ಣದ ಬೆಳಕಿನ ವಿನ್ಯಾಸ ಮಾಡಲಾಗಿತ್ತು. ಲೇಜರ್ ಬೀಮ್‌ಗಳನ್ನೂ ಬಿಡಲಾಯಿತು. ಅಬ್ಬರದ ಸಂಗೀತದ ಹಿನ್ನೆಲೆಯೂ ಇತ್ತು. ಈ ಕಾರ್ಯಕ್ರಮದ ನೇರ ಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗಿತ್ತು. ವಿಶ್ವದ ಮೂಲೆಮೂಲೆಗಳಲ್ಲಿರುವ ಅಭಿಮಾನಿಗಳು ಮತ್ತು ಮುಂಬೈನ ಹೋಟೆಲ್‌ಗಳಲ್ಲಿ ಬಯೊಬಬಲ್‌ನಲ್ಲಿರುವ ಆಟಗಾರರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ರಾಯಲ್ಸ್ ತಂಡವನ್ನು ಹೃದಯಾಂತರಾಳದಿಂದ ಪ್ರೀತಿಸುವ ಅಭಿಮಾನಿಗಳಿಗೆ ಮುದ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಶಾಲ ಕ್ರೀಡಾಂಗಣ, ಜೈಪುರ ನಗರದ ಸೌಂದರ್ಯ, ರಾಜಸ್ಥಾನದ ಸಂಸ್ಕೃತಿ ಮುಂತಾದವುಗಳನ್ನು ಬಿಂಬಿಸಿದ ಕಾರ್ಯಕ್ರಮದಲ್ಲಿ ಫ್ರಾಂಚೈಸ್‌ ಜೊತೆ ಕೈಜೋಡಿಸಿರುವ ರೆಡ್ ಬುಲ್ ಕಂಪನಿಗೆ ಹೊಸ ಹುರುಪು ತುಂಬುವ ಚಿಂತನೆಯೂ ಅಡಗಿತ್ತು ಎಂದು ರಾಯಲ್ಸ್ ಪ್ರಕಟಣೆ ತಿಳಿಸಿದೆ. ‘ಹೊಸ ಜೆರ್ಸಿ ಬಿಡುಗಡೆ ಕಾರ್ಯಕ್ರಮ ರೋಮಾಂಚಕವಾಗಿತ್ತು. 2015ರಿಂದ ಇಲ್ಲಿಯ ವರೆಗೆ ರಾಯಲ್ಸ್‌ ಜೆರ್ಸಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಈಗಿನ ಜೆರ್ಸಿ ಹೆಚ್ಚು ಸುಂದರವಾಗಿದೆ‘ ಎಂದು ಐಪಿಎಲ್‌ ಆಟಗಾರರ ಹರಾಜಿನಲ್ಲಿ ಅತ್ಯಧಿಕ ಮೊತ್ತಕ್ಕೆ ಮಾರಾಟವಾಗಿರುವ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ರಿಸ್ ಮೋರಿಸ್‌ ಅಭಿಪ್ರಾಯಪಟ್ಟರು. ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ರಾಯಲ್ಸ್ ಚಾಂಪಿಯನ್ ಆಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.