2021: ಪಡಿಕ್ಕಲ್‌ಗೆ ವಿಶೇಷ ಟಾಸ್ಕ್ ಕೊಟ್ಟ ವಿಂಡೀಸ್ ದಿಗ್ಗಜ ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವೆಸ್ಟ್‌ಇಂಡೀಸ್‌ನ ಮಾಜಿ ದಿಗ್ಗಜ ಬ್ರಿಯಾನ್ ಲಾರಾ, ಯುವ ಆಟಗಾರ ಪ್ರಸಕ್ತ ಋತುವಿನಲ್ಲಿ ಶತಕ ಗಳಿಸಬೇಕೆಂದು ಬಯಸಿದ್ದಾರೆ. ಐಪಿಎಲ್ 14ನೇ ಆವೃತ್ತಿಯಲ್ಲಿ ಬೆಂಗಳೂರಿನ ಯುವ ಬ್ಯಾಟ್ಸ್‌ಮನ್ ಕೆಲವೊಂದು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆಲ್ಲಬೇಕೆಂದು ಲಾರಾ ಬಯಸಿದ್ದಾರೆ. ದೇವದತ್ ಪಡಿಕ್ಕಲ್ ಪ್ರತಿಭಾವಂತ ಆಟಗಾರ. ಕಳೆದ ವರ್ಷ ಒಂದೆರಡು ಅರ್ಧಶತಕಗಳನ್ನು ಗಳಿಸಿದ್ದರು. ವಿರಾಟ್ ಕೊಹ್ಲಿ ಅವರಿಗೆ ಉತ್ತಮ ಬೆಂಬಲ ನೀಡಿದ್ದರು. 2021ನೇ ಆವೃತ್ತಿಯಲ್ಲಿ ಕೆಲವು ಪಂದ್ಯಶ್ರೇಷ್ಠ ಪ್ರಶಸ್ತಿ ಜೊತೆಗೆ ಒಂದೆರಡು ಶತಕ ಬಾರಿಸುವುದನ್ನು ಎದುರು ನೋಡುತ್ತಿದ್ದೇನೆ. ಈ ಬಾರಿಯ ಐಪಿಎಲ್‌ನಲ್ಲಿ ಈ ಯುವ ಆಟಗಾರ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯನ್ನಿಟ್ಟುಕೊಂಡಿದ್ದೇನೆ ಎಂದು ಲಾರಾ ಹೇಳಿದ್ದಾರೆ. ಇದನ್ನೂ ಓದಿ:ಐಪಿಎಲ್‌: ಹೈದರಾಬಾದ್‌ ‘ಚಾಲೆಂಜ್‌’ ಮೀರಿದ ವಿರಾಟ್ ಕೊಹ್ಲಿ ಬಳಗ ಐಪಿಎಲ್ ಆರಂಭಕ್ಕೂ ಮೊದಲು ಕೋವಿಡ್ ಸೋಂಕಿಗೊಳಗಾಗಿದ್ದ ದೇವದತ್ ಪಡಿಕ್ಕಲ್, ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಕಳೆದ ಸಾಲಿನಲ್ಲಿ ಪ್ರಭಾವಿ ಎನಿಸಿಕೊಂಡಿದ್ದ ಪಡಿಕ್ಕಲ್ 15 ಪಂದ್ಯಗಳಲ್ಲಿ 31.53ರ ಸರಾಸರಿಯಲ್ಲಿ 473 ರನ್ ಗಳಿಸಿದ್ದರು. ಇದರಲ್ಲಿ ವೈಯಕ್ತಿಕ ಗರಿಷ್ಠ 74 ರನ್ ಸೇರಿತ್ತು. ಪ್ರಸಕ್ತ ಸಾಲಿನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಪರ ಅತ್ಯುತ್ತಮ ಪ್ರದರ್ಶನ ನೀಡಿರುವ ಪಡಿಕ್ಕಲ್, ಒಟ್ಟು 737 ರನ್ ಕಲೆ ಹಾಕಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.