2021: ಕಿಂಗ್ ಕೊಹ್ಲಿ ದಾಖಲೆ ಮುರಿದ ಕನ್ನಡಿಗ ರಾಹುಲ್ ಚೆನ್ನೈ: ವಿರಾಟ್ ಕೊಹ್ಲಿ ಅವರನ್ನೇ ಮೀರಿಸಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮಗದೊಂದು ಸ್ಮರಣೀಯ ದಾಖಲೆ ಬರೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ರಾಹುಲ್, ಸ್ಮರಣೀಯ ಮೈಲಿಗಲ್ಲು ತಲುಪಿದ್ದಾರೆ. ವಿರಾಟ್ ಕೊಹ್ಲಿ ಹಿಂದಿಕ್ಕಿರುವ ರಾಹುಲ್, ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 5,000 ರನ್ ಮೈಲಿಗಲ್ಲು ತಲುಪಿದ ಭಾರತೀಯ ಆಟಗಾರ ಎಂದೆನಿಸಿದ್ದಾರೆ. ಕೆ.ಎಲ್. ರಾಹುಲ್ 143ನೇ ಇನ್ನಿಂಗ್ಸ್‌ನಲ್ಲಿ ಈ ದಾಖಲೆ ತಲುಪಿದ್ದಾರೆ. ವಿರಾಟ್ ಕೊಹ್ಲಿ 167 ಇನ್ನಿಂಗ್ಸ್‌ನಲ್ಲಿ ಅದೇ ಸಾಧನೆ ಮಾಡಿದ್ದರು. ಹಾಗೆಯೇ ಒಟ್ಟಾರೆಯಾಗಿ ವಿಶ್ವ ಟಿ20 ಕ್ರಿಕೆಟ್‌ನಲ್ಲಿ 5,000 ರನ್ ಗಳಿಸಿದ ಎರಡನೇ ಅತಿ ವೇಗದ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ. ವೆಸ್ಟ್‌ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್ 'ಯೂನಿವರ್ಸ್ ಬಾಸ್' ಖ್ಯಾತಿಯ ಪಂಜಾಬ್ ಕಿಂಗ್ಸ್ ತಂಡದ ಸಹ ಆಟಗಾರ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದು, 132 ಇನ್ನಿಂಗ್ಸ್‌ನಲ್ಲಿ ಈ ದಾಖಲೆ ಬರೆದಿದ್ದರು. ಏತನ್ಮಧ್ಯೆ ಹೈದರಾಬಾದ್ ಸಾಂಘಿಕ ದಾಳಿಗೆ ಕುಸಿತ ಅನುಭವಿಸಿದ ಪಂಜಾಬ್ ಕೇವಲ 120 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ರಾಹುಲ್ 4 ಹಾಗೂ ಗೇಲ್ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.