ಕೋವಿಡ್‌: ₹ 11 ಕೋಟಿ ಸಂಗ್ರಹಿಸಿದ ವಿರಾಟ್‌–ಅನುಷ್ಕಾ ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ನಡೆಸುತ್ತಿರುವ ಕೋವಿಡ್ ಪರಿಹಾರ ನಿಧಿ ಸಂಗ್ರಹ ಅಭಿಯಾನದಲ್ಲಿ ಸುಮಾರು ₹ 11 ಕೋಟಿ ಸಂಗ್ರಹವಾಗಿದೆ. ಕೊಹ್ಲಿ ದಂಪತಿ ಆರಂಭದಲ್ಲಿ ₹ 2 ಕೋಟಿ ದೇಣಿಗೆ ನೀಡಿ ಅಭಿಯಾನ ಆರಂಭಿಸಿದ್ದರು. ಇಲ್ಲಿ ಸಂಗ್ರಹವಾದ ಮೊತ್ತವನ್ನು ಆ್ಯಕ್ಟ್ ಗ್ರ್ಯಾಂಟ್ಸ್‌ ಸಂಸ್ಥೆಗೆ ನೀಡಲಾಗುತ್ತದೆ. ಈ ಸಂಸ್ಥೆಯು ಆಮ್ಲಜನಕ, ವೈದ್ಯರ ಸೇವೆ, ಲಸಿಕೆ ಕುರಿತು ಜಾಗೃತಿ ಹಾಗೂ ಟೆಲಿ ಮೆಡಿಸಿನ್ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಒಂದು ವಾರದ ಅವಧಿಗೆ ನಡೆಯುತ್ತಿರುವ ಅಭಿಯಾನಕ್ಕೆ ಇನ್ನೂ ಎರಡು ದಿನ ಬಾಕಿ ಇದೆ. ಒಟ್ಟು ₹ 7 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ ಆ ಮೊತ್ತವನ್ನು ದಾಟಿಅಭಿಯಾನ ಮುಂದುವರಿದಿದೆ. ಇಸ್ಪೋರ್ಟ್ಸ್ ಸಂಸ್ಥೆಯಾದ ಎಂಪಿಎಲ್‌ ಕೂಡ ಕೋವಿಡ್ ಪರಿಹಾರ ನಿಧಿಗೆ ₹ 5 ಕೋಟಿ ನೀಡಿದೆ. ‘ನಿಧಿ ಸಂಗ್ರಹ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ‘ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.