2021: ಚೆನ್ನೈ ಬಳಿಕ ಕೆಕೆಆರ್ ಪಂದ್ಯಕ್ಕೂ ಅಲಭ್ಯರಾದ ಹಾರ್ದಿಕ್ ಪಾಂಡ್ಯ ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯಕ್ಕೂ ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಲಭ್ಯರಾಗಿದ್ದಾರೆ. ಇದು ಹಾರ್ದಿಕ್ ಫಿಟ್ನೆಸ್ ಸಮಸ್ಯೆಯ ಬಗ್ಗೆ ಮತ್ತಷ್ಟು ಸಂದೇಹ ಮೂಡಲು ಕಾರಣವಾಗಿದೆ. ಇತ್ತೀಚಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಕ್ರಿಕೆಟ್ ಆಡದಿರುವ ಹೊರತಾಗಿಯೂ ಪಾಂಡ್ಯ ಅವರಿಗೆ ಫಿಟ್ನೆಸ್ ಸಮಸ್ಯೆ ಹೇಗೆ ಕಾಡಿದೆಎಂಬುದು ತಿಳಿದು ಬಂದಿಲ್ಲ. ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಎರಡನೇ ಹಂತದ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಮೊದಲ ಪಂದ್ಯದಿಂದಲೂ ಹಾರ್ದಿಕ್ ಹೊರಗುಳಿದಿದ್ದರು. ಈಗ ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ಆಯ್ಕೆಗೆ ಪರಿಗಣಿಸಲಾಗಿಲ್ಲ. ಅಲ್ಲದೆ ವಿಶ್ರಾಂತಿ ಸೂಚಿಸಲಾಗಿದೆ. ಕಳೆದ ಪಂದ್ಯದ ವೇಳೆ ಪ್ರತಿಕ್ರಿಯೆ ನೀಡಿರುವ ಮುಂಬೈ ಇಂಡಿಯನ್ಸ್ ತರಬೇತುದಾರ ಮಹೇಲಾ ಜಯವರ್ಧನೆ, ಹಾರ್ದಿಕ್ ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂದಷ್ಟೇ ಹೇಳಿದ್ದರು. ಐಪಿಎಲ್ ಬಳಿಕ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ಈಗ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಪಾಂಡ್ಯ, ನಿಗದಿತ ಅವಧಿಯೊಳಗೆ ಚೇತರಿಸಿಕೊಳ್ಳುವರೇ ಎಂಬ ಅನುಮಾನ ಕಾಡುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.