ನ್ಯೂಜಿಲೆಂಡ್ ತಂಡದ ಅಭ್ಯಾಸದಲ್ಲಿ ಪಾಲ್ಗೊಂಡ ‘ಐಪಿಎಲ್ ಆಟಗಾರರು’ ಸೌತಾಂಪ‍್ಟನ್‌: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಯಲ್ಲಿ ಆಡಿದ್ದಕೇನ್ ವಿಲಿಯಮ್ಸನ್ ಸೇರಿ ನ್ಯೂಜಿಲೆಂಡ್ ತಂಡದ ಆಟಗಾರರು ಹಾಗೂ ಸಿಬ್ಬಂದಿ ಸೋಮವಾರ ತಮ್ಮ ತಂಡದ ಅಭ್ಯಾಸಕ್ಕೆ ಸೇರಿಕೊಂಡರು. ನ್ಯೂಜಿಲೆಂಡ್‌ ಕ್ರಿಕೆಟ್ ಮಂಡಳಿ (ಎನ್‌ಜೆಡ್‌ಸಿ) ಈ ವಿಷಯ ತಿಳಿಸಿದೆ. ಕಿವೀಸ್ ಬಳಗವು ಆತಿಥೇಯ ಇಂಗ್ಲೆಂಡ್ ಎದುರು ಎರಡು ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದ ವಿಲಿಯಮ್ಸನ್‌, ಕೈಲ್ ಜೆಮೀಸನ್‌, ಮಿಚೆಲ್ ಸ್ಯಾಂಟನರ್‌, ಫಿಸಿಯೊ ಟಾಮಿ ಸಿಮ್ಸೆಕ್‌ ಹಾಗೂ ಸ್ಟ್ರೆಂಥ್ ಆ್ಯಂಡ್ ಕಂಡಿಷನಿಂಗ್ ಕೋಚ್‌ ಕ್ರಿಸ್ ಡೊನಾಲ್ಡ್‌ಸನ್‌ ಅವರು ಕಳೆದ ವಾರ ಮಾಲ್ಡೀವ್ಸ್‌ನಿಂದ ಇಂಗ್ಲೆಂಡ್‌ಗೆ ಆಗಮಿಸಿದ್ದರು. ಆದರೆ ತಂಡದ ತರಬೇತಿಗೆ ಸೇರಿಕೊಂಡಿರಲಿಲ್ಲ. ‘ಮತ್ತೆ ಒಂದುಗೂಡುವಿಕೆ! ಐಪಿಎಲ್‌ನಲ್ಲಿ ಆಡಿದ್ದ ನಮ್ಮವರು ಮೊದಲ ಬಾರಿಗೆ ತಂಡದ ತಾಲೀಮಿಗೆ ಸೇರಿಕೊಂಡಿದ್ದಾರೆ. ಇದು ಸಕಾರಾತ್ಮಕ ಸುದ್ದಿ. ತಂಡವು ಇನ್ನೂ ಒಳಾಂಗಣದ ಅಭ್ಯಾಸದಲ್ಲೇ ಇರುವುದರಿಂದ ಅಷ್ಟೊಂದು ಸಕಾರಾತ್ಮಕವೇನೂ ಅಲ್ಲ‘ ಎಂದು ‘ಬ್ಲ್ಯಾಕ್ ಕ್ಯಾಪ್ಸ್‘ ಟ್ವೀಟ್ ಮಾಡಿದೆ. ಇಂಗ್ಲೆಂಡ್ ವಿರುದ್ಧ ಕಿವೀಸ್ ತಂಡವು ಮುಂದಿನ ತಿಂಗಳ ಮೊದಲ ಮತ್ತು ಎರಡನೇ ವಾರಗಳಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಬಳಿಕ ಜೂನ್ 18ರಿಂದ 22ರವರೆಗೆ ಭಾರತದ ಎದುರಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಕಣಕ್ಕಿಳಿಯಲಿದೆ. ಬಯೋಬಬಲ್‌ನಲ್ಲಿ ಕೋವಿಡ್‌ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.