ದೇಶಕ್ಕಾಗಿ ಆಡುವಾಗ ವೈಯಕ್ತಿಕ ಭಿನ್ನಾಭಿಪ್ರಾಯಕ್ಕೆ ಬೆಲೆಯಿಲ್ಲ -ಮಿಥಾಲಿ ರಾಜ್ ನವದೆಹಲಿ: ದೇಶಕ್ಕಾಗಿ ಆಡುವಾಗ ‌ವೈಯಕ್ತಿಕ ಭಿನ್ನಾಭಿಪ್ರಾಯಗಳಿಗೆ ಮಹತ್ವವಿಲ್ಲ. ತಂಡದ ಗೆಲುವಿಗಾಗಿ ಮುನ್ನಡೆಯುತ್ತೇವೆ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ನಾ‌ಯಕಿ ಮಿಥಾಲಿ ರಾಜ್ ಹೇಳಿದ್ದಾರೆ. ಇದರೊಂದಿಗೆ ಮಹಿಳಾ ತಂಡಕ್ಕೆ ಈಚೆಗೆ ಆಯ್ಕೆಯಾದ ರಮೇಶ್ ಪೊವಾರ್ ಮತ್ತು ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಅವರು ಭಾನುವಾರ ಪ್ರತಿಕ್ರಿಯಿಸಿದ್ದಾರೆ. ಹೋದ ವರ್ಷ ಪೊವಾರ್ ತಂಡದ ಕೋಚ್ ಆಗಿದ್ದ ಸಂದರ್ಭದಲ್ಲಿ ಮಿಥಾಲಿ ಅವರೊಂದಿಗೆ ಭಿನ್ನಾಭಿಪ್ರಾಯ ತಲೆದೋರಿತ್ತು. ಅದರಿಂದಾಗಿ ರಮೇಶ್ ಕೋಚ್ ಸ್ಥಾನ ಕಳೆದುಕೊಂಡಿದ್ದರು. ಮಿಥಾಲಿ ಬಳಗವು ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಸಿದ್ಧತೆ ನಡೆಸುತ್ತಿದೆ. ಅದಕ್ಕಾಗಿ ಮುಂಬೈನಲ್ಲಿ ತಂಡವು ಕ್ವಾರಂಟೈನ್‌ ಆಗಿದೆ. ಏಳು ವರ್ಷಗಳ ನಂತರ ಭಾರತದ ವನಿತೆಯರು ಟೆಸ್ಟ್ ಕ್ರಿಕೆಟ್ ಆಡಲು ಇಂಗ್ಲೆಂಡ್‌ಗೆ ತೆರಳುತ್ತಿರುವುದು ವಿಶೇಷ. ‘ಬಹಳ ವರ್ಷಗಳಿಂದ ತಂಡದಲ್ಲಿ ಆಡುತ್ತಿದ್ದೇನೆ. ಯಾವತ್ತೂ ನನ್ನ ಅಹಂಕಾರ ತೋರಿಸಿಲ್ಲ. ವೈಯಕ್ತಿಕ ಇಷ್ಟಾನಿಷ್ಟಗಳೇನೆ ಇದ್ದರೂ ತಂಡದ ಮೇಲೆ ಅದರ ಪರಿಣಾಮವಾಗಲು ಬಿಟ್ಟಿಲ್ಲ‘ ಎಂದು ಮಿಥಾಲಿ ಹೇಳಿದ್ದಾರೆ. ‘21 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಬಹಳಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಭಾರತ ತಂಡಕ್ಕೆ ಆಡುವ ಮಾತು ಬಂದಾಗ ಅದು ದೇಶಸೇವೆ. ಅದರಲ್ಲಿ ಯಾವುದೇ ರಾಜೀ ಇಲ್ಲ. ನನ್ನ ಸರ್ವಸಾಮರ್ಥ್ಯವನ್ನು ಅರ್ಪಿಸುತ್ತೇನೆ‘ ಎಂದು 38 ವರ್ಷದ ಮಿಥಾಲಿ ಪ್ರತಿಕ್ರಿಯಿಸಿದ್ದಾರೆ. ಕ್ವಾರಂಟೈನ್‌ನಲ್ಲಿರುವ ಆಟಗಾರ್ತಿಯರು, ಕೋಚ್ ಮತ್ತು ಸಿಬ್ಬಂದಿಯು ಜೂಮ್ ವಿಡಿಯೊ ಕಾಲಿಂಗ್ ಮೂಲಕ ಸಭೆಗಳನ್ನು ನಡೆಸುತ್ತಿದ್ದಾರೆ. ತಂಡದ ಮುಂದಿನ ಆಗುಹೋಗುಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ. ‘ಅವರು (ಪೊವಾರ್) ಕೋಚ್ ಆಗಿದ್ದಾರೆ. ಅವರಿಗೆ ತಮ್ಮದೇ ಆದ ಯೋಚನಾಲಹರಿ ಮತ್ತು ಯೋಜನೆಗಳು ಇರುತ್ತವೆ. ನಮ್ಮಿಬ್ಬರ ಯೋಚನೆಗಳೂ ಹೆಚ್ಚುಕಮ್ಮಿ ಒಂದೇ ರೀತಿಯಾಗಿ ಸಾಗಿದಾಗ ತಂಡಕ್ಕೆ ಒಳ್ಳೆಯದಾಗುತ್ತದೆ. ಅದೇ ನಮ್ಮ ಉದ್ದೇಶವೂ ಹೌದು‘ ಎಂದು ವಿವರಿಸಿದ್ದಾರೆ. ‘ಈಗಾಗಲೇ ನಾವು ಪರಸ್ಪರ ಚರ್ಚೆಗಳು, ಮಾತುಕತೆಗಳನ್ನು ಮಾಡಿದ್ದೇವೆ. ಇಬ್ಬರಲ್ಲೂ ಸ್ಪಷ್ಟ ಅಭಿಪ್ರಾಯಗಳು ಮೂಡಿವೆ. ಇಲ್ಲಿಂದ ಮುಂದೆ ಗುರಿಸಾಧನೆಯತ್ತ ಸಾಗುತ್ತೇವೆ‘ ಎಂದು ಮಿಥಾಲಿ ವಿಶ್ವಾಸ ವ್ಯಕ್ತಪಡಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.