ವೆಸ್ಟ್ ಇಂಡೀಸ್ ತಂಡದಲ್ಲಿ ಯುವ ವೇಗಿ ಜೇಡನ್ ಸೀಲ್ಸ್‌ ಗ್ರಾಸ್‌ ಐಲೆಟ್‌, ಸೇಂಟ್ ಲೂಸಿಯಾ: ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್‌ ತಾತ್ಕಾಲಿಕ ತಂಡವನ್ನು ಪ್ರಕಟಿಸಲಾಗಿದ್ದು, ಯುವ ವೇಗಿ ಜೇಡನ್ ಸೀಲ್ಸ್ ಸ್ಥಾನ ಗಿಟ್ಟಿಸಿದ್ದಾರೆ. ಸದ್ಯ 17 ಮಂದಿಯ ತಂಡವನ್ನು ಪ್ರಕಟಿಸಲಾಗಿದ್ದು, ಸೋಮವಾರ ಈ ಸಂಖ್ಯೆಯನ್ನು 13ಕ್ಕೆ ಇಳಿಸುವ ನಿರೀಕ್ಷೆಯಿದೆ. ಕ್ರೆಗ್ ಬ್ರಾಥ್‌ವೇಟ್ ತಂಡದ ನಾಯಕರಾಗಿದ್ದಾರೆ. ಗಾಯಗೊಂಡಿರುವ ವೇಗಿ ಚೇಮರ್ ಹೋಲ್ಡರ್ ಅವರನ್ನು ತಂಡಕ್ಕೆ ಸೇರಿಸಲಾಗಿಲ್ಲ ಎಂದು ಆಯ್ಕೆ ಸಮಿತಿ ತಿಳಿಸಿದೆ. 19 ವರ್ಷದ ಸೀಲ್ಸ್ ಇದುವರೆಗೆ ಆರು ಟ್ವೆಂಟಿ–20, ಮೂರು ಲಿಸ್ಟ್ ‘ಎ’ ಪಂದ್ಯಗಳು ಮತ್ತು ಒಂದು ಪ್ರಥಮದರ್ಜೆ ಪಂದ್ಯದಲ್ಲಿ ಆಡಿದ್ದಾರೆ. ಶ್ರೀಲಂಕಾ ಎದುರಿನ ಸರಣಿಯಿಂದ ಹೊರಗುಳಿದಿದ್ದ ಆರಂಭಿಕ ಆಟಗಾರರಾದ ಶಾಯ್ ಹೋಪ್‌, ಕೀರನ್ ಪೊವೆಲ್‌ ಮತ್ತು ಆಲ್‌ರೌಂಡರ್ ರಾಸ್ಟನ್ ಚೇಸ್‌ ಕೂಡ ತಂಡಕ್ಕೆ ಮರಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳು (ಕ್ರಮವಾಗಿ ಜೂನ್‌ 10ರಿಂದ 14 ಮತ್ತು 18ರಿಂದ 22) ಡರೆನ್ ಸಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ತಂಡ ಇಂತಿದೆ: ಕ್ರೆಗ್ ಬ್ರಾಥ್‌ವೇಟ್‌ (ನಾಯಕ), ಜೆರ್ಮೈನ್ ಬ್ಲ್ಯಾಕ್‌ವುಡ್‌ (ಉಪನಾಯಕ), ಕುಮ್ರಾ ಬಾನರ್‌, ಡರೆನ್‌ ಬ್ರಾವೊ, ರಾಸ್ಟನ್ ಚೇಸ್‌, ರಖೀಮ್ ಕಾರ್ನವಾಲ್‌, ಜೋಷುವಾ ಡ ಸಿಲ್ವಾ, ಶಾನನ್ ಗೇಬ್ರಿಯಲ್‌, ಜಾಹಮರ್ ಹ್ಯಾಮಿಲ್ಟನ್‌, ಜೇಸನ್ ಹೋಲ್ಡರ್‌, ಶಾಯ್ ಹೋಪ್‌, ಅಲ್ಜರಿ ಜೋಸೆಫ್‌, ಕೈಲ್ ಮಯರ್ಸ್, ಕೀರನ್ ಪೊವೆಲ್‌, ಕೆಮರ್ ರೋಚ್‌, ಜೇಡನ್ ಸೀಲ್ಸ್ ಮತ್ತು ಜೊಮೆಲ್ ವಾರಿಕನ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.