ಟೆಸ್ಟ್ ಕ್ರಿಕೆಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಅಲ್ಪ ಮುನ್ನಡೆ ಲಂಡನ್: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್‌ನ ನಾಲ್ಕನೇ ದಿನದಾಟದ ಭೋಜನ ವಿರಾಮದ ವೇಳೆಗೆ ಭಾರತ ತಂಡವು 3 ವಿಕೆಟ್ ಕಳೆದುಕೊಂಡು 56 ರನ್‌ ಗಳಿಸಿದೆ. ಆರಂಭಿಕ ರೋಹಿತ್‌ ಶರ್ಮಾ (21), ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಕೆ.ಎಲ್‌. ರಾಹುಲ್‌ (5) ಮತ್ತು ನಾಯಕ ವಿರಾಟ್‌ ಕೊಹ್ಲಿ (20) ಔಟಾಗಿದ್ದಾರೆ. ಚೇತೇಶ್ವರ ಪೂಜಾರ (3) ಮತ್ತು ಉಪನಾಯಕ ಅಜಿಂಕ್ಯ ರಹಾನೆ (1) ಕ್ರೀಸ್‌ನಲ್ಲಿದ್ದಾರೆ. ಇದರೊಂದಿಗೆ ಭಾರತ ತಂಡಕ್ಕೆ 29 ರನ್‌ಗಳ ಅಲ್ಪ ಮುನ್ನಡೆ ದೊರೆತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಗಮನಾರ್ಹ ಮೊತ್ತ ದಾಖಲಿಸಿದ್ದ ಭಾರತ ತಂಡಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ಮಾರ್ಕ್ ವುಡ್ ಮತ್ತು ಸ್ಯಾಮ್ ಕರ್ರನ್ ಆಘಾತ ನೀಡಿದರು. ಇಂಗ್ಲೆಂಡ್‌ ಪರ ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ಜೋ ರೂಟ್ ಸುಂದರ ಶತಕ (ಔಟಾಗದೆ 180; 321ಎ, 18 ಬೌಂ) ದಾಖಲಿಸಿದ್ದರು. ಪರಿಣಾಮವಾಗಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 27 ರನ್‌ಗಳ ಅಲ್ಪ ಮುನ್ನಡೆ ಗಳಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.