ಭಾರತ–ಇಂಗ್ಲೆಂಡ್ ಏಕದಿನ ಕ್ರಿಕೆಟ್ ಪಂದ್ಯ ಇಂದು: ಪದಾರ್ಪಣೆಗೆ ಶಫಾಲಿ ವರ್ಮಾ ಸಿದ್ಧ ಬ್ರಿಸ್ಟಲ್: ನವಪ್ರತಿಭೆ ಶಫಾಲಿ ವರ್ಮಾ ಭಾನುವಾರ ಇಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಣ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. 17 ವರ್ಷದ ಶಫಾಲಿ ಈಗಾಗಲೇ 22 ಅಂತರರಾಷ್ಟ್ರೀ ಟಿ20 ಪಂದ್ಯಗಳನ್ನು ಆಡಿದ್ದಾರೆ. ತಮ್ಮ ಮಿಂಚಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಈಚೆಗೆ ಇಲ್ಲಿಯೇ ನಡೆದ ಇಂಗ್ಲೆಂಡ್ ಎದುರಿನ ಏಕೈಕ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದ ಅವರು ಎರಡೂ ಇನಿಂಗ್ಸ್‌ಗಳಲ್ಲಿ (96 ಮತ್ತು 63) ಮಿಂಚಿದ್ದರು. ಅದರಿಂದಾಗಿ ಇಂಗ್ಲೆಂಡ್ ಎದುರಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಬೌಲರ್‌ಗಳಾದ ಕ್ಯಾಥರಿನ್ ಬ್ರಂಟ್, ಅನ್ಯಾ ಶ್ರಬ್‌ಸೋಲ್, ಕೇಟ್ ಕ್ರಾಸ್, ನಥಾಲಿ ಶಿವರ್ ಮತ್ತು ಸೋಫಿ ಅವರ ಎಸೆತಗಳನ್ನು ಹರಿಯಾಣದ ಶಫಾಲಿ ದಿಟ್ಟತನದಿಂದ ಎದುರಿಸಿದ್ದರು. ತಂಡದ ಉಪನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಸದ್ಯ ಉತ್ತಮ ಫಾರ್ಮ್‌ನಲ್ಲಿ ಇಲ್ಲ. ಆದ್ದರಿಂದ ದೊಡ್ಡ ಹೊಡೆತಗಳ ಆಟಗಾರ್ತಿಯೆಂದೇ ಗುರುತಿಸಿಕೊಂಡಿರುವ ಶಫಾಲಿ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ. ಮಿಥಾಲಿ ರಾಜ್ ಮತ್ತು ಪೂನಮ್ ರಾವತ್ ಅವರೂ ತಮ್ಮ ಬ್ಯಾಟಿಂಗ್ ಬಲ ತೋರಿಸಿದರೆ ತಂಡವು 235–240 ರನ್‌ಗಳ ಮೊತ್ತವನ್ನು ತಲುಪುವುದು ಸುಲಭವಾಗುತ್ತದೆ. ಬೌಲರ್‌ಗಳಾದ ಅನುಭವಿ ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಕರ್ ಮತ್ತು ಅರುಂಧತಿ ರೆಡ್ಡಿ ಅವರ ಮುಂದೆ ಇಂಗ್ಲೆಂಡ್ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲಿದೆ. ವಿಕೆಟ್‌ ಕೀಪರ್ ತಾನಿಯಾ ಭಾಟಿಯಾ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇಂಗ್ಲೆಂಡ್ ತಂಡದಲ್ಲಿ ಸೋಫಿಯಾ ಡಂಕ್ಲಿ ಕೂಡ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ಅವರೂ ಈ ಹಿಂದಿನ ಟೆಸ್ಟ್‌ನಲ್ಲಿ ಮೊದಲ ಬಾರಿ ಆಡಿದ್ದರು. ತಂಡಗಳು: ಭಾರತಮಿಥಾಲಿ ರಾಜ್ (ನಾಯಕಿ), ತಾನಿಯಾ ಭಾಟಿಯಾ (ವಿಕೆಟ್‌ಕೀಪರ್), ಶಫಾಲಿ ವರ್ಮಾ, ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ, ಶಿಖಾ ಪಾಂಡೆ, ಸ್ನೇಹ ರಾಣಾ, ಪೂನಂ ಯಾದವ್, ಜೂಲನ್ ಗೋಸ್ವಾಮಿ, ಏಕ್ತಾ ಬಿಷ್ಟ್, ಪೂನಂ ರಾವತ್, ಪೂಜಾ ವಸ್ತ್ರಕರ್, ರಾಧಾ ಯಾದವ್, ಪ್ರಿಯಾ ಪೂನಿಯಾ, ಅರುಂಧತಿ ರೆಡ್ಡಿ, ಇಂದ್ರಾಣಿ ರಾಯ್. ಇಂಗ್ಲೆಂಡ್: ಹೀಥರ್ ನೈಟ್ (ನಾಯಕಿ), ಎಮಿ ಎಲೆನ್ ಜೋನ್ಸ್ (ವಿಕೆಟ್‌ಕೀಪರ್), ಟ್ಯಾಮಿ ಬೆಮೌಂಟ್, ನತಾಲೀ ಶಿವರ್, ಫ್ರಾನ್ ವಿಲ್ಸನ್, ಲಾರನ್ ವಿನ್‌ಫೀಲ್ಡ್ ಹಿಲ್, ಕ್ಯಾಥರಿನ್ ಬ್ರಂಟ್, ಸೋಫಿ ಎಕ್ಸೆಲಸ್ಟೊನ್, ಸಾರಾ ಗ್ಲೆನ್, ಕೇಟ್ ಕ್ರಾಸ್, ಅನ್ಯಾ ಶ್ರಬ್‌ಸೋಲ್, ನತಾಶಾ ಫರಾಂಟ್, ಸೋಫಿಯಾ ಡಂಕ್ಲಿ, ಫ್ರೆಯಾ ಡೇವಿಸ್, ಮ್ಯಾಡಿ ವಿಲ್ಲರ್, ಎಮಿಲಿ ಅರ್ಲಾಟ್. ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.