ಪಿಸಿಬಿ ಅಧಿಕಾರಿಯ ಅನುಚಿತ ವರ್ತನೆಗೆ ಬೇಸತ್ತು ಯೂನಿಸ್‌ ಖಾನ್‌ ರಾಜೀನಾಮೆ ಕರಾಚಿ: ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಅಧಿಕಾರಿಯೊಬ್ಬರ ಅನುಚಿತ ವರ್ತನೆಯೇ ಯೂನಿಸ್‌ ಖಾನ್‌ ಅವರು ಬ್ಯಾಟಿಂಗ್‌ ಕೋಚ್‌ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನ ತಂಡವು ಜೂನ್‌ 25ರಿಂದ ಜುಲೈ 20ರವರೆಗೆ ಇಂಗ್ಲೆಂಡ್‌ , ಬಳಿಕ ಜುಲೈ 21ರಿಂದ ಆಗಸ್ಟ್‌ 24ರವರೆಗೆ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳಲಿದೆ. ಈ ಸಂದರ್ಭದಲ್ಲಿ ಯೂನಿಸ್ ಖಾನ್ ರಾಜೀನಾಮೆ ನೀಡಿದ್ದು ಅಚ್ಚರಿಗೆ ಕಾರಣವಾಗಿತ್ತು. ‘ಯೂನಿಸ್‌ ಖಾನ್‌ ಅವರು ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದು, ಕರಾಚಿಯಲ್ಲಿ ಸಂಕೀರ್ಣವಾದ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದರು. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ಪ್ರವಾಸಕ್ಕೆ ಸಂಬಂಧಿಸಿ ಬಯೋಬಬಲ್‌ಗೆ ಕೆಲವು ದಿನಗಳ ನಂತರ ಸೇರ್ಪಡೆಗೊಳ್ಳಲು ಅನುಮತಿ ನೀಡುವಂತೆ ಅವರು ಮಂಡಳಿಗೆ ಮನವಿ ಮಾಡಿದ್ದರು. ಇದೇ ವಿಷಯವಾಗಿ ಮಂಡಳಿಯ ಅಧಿಕಾರಿಯೊಬ್ಬರೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಇದೇ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದಾರೆ’ ಎಂದು ಉನ್ನತ ಮೂಲಗಳು ಹೇಳಿವೆ. ಇದನ್ನೂ ಓದಿ: ಇಂಗ್ಲೆಂಡ್‌ ಪ್ರವಾಸಕ್ಕೆ 2 ದಿನ ಮುನ್ನ ಪಾಕ್‌ ಕೋಚ್‌ ಯೂನಿಸ್‌ ಖಾನ್‌ ರಾಜೀನಾಮೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.