ಧನುಷ್ಕ, ಮೆಂಡಿಸ್ ಮೇಲೆ ನಿಷೇಧಕ್ಕೆ ಶಿಫಾರಸು ಕೊಲಂಬೊ: ಇಂಗ್ಲೆಂಡ್‌ ಪ್ರವಾಸದಲ್ಲಿ ಬಯೋಬಬಲ್ ನಿಯಮ ಉಲ್ಲಂಘಿಸಿದ ತಂಡದ ಬ್ಯಾಟ್ಸ್‌ಮನ್‌ಗಳಾದ ಧನುಷ್ಕ ಗುಣತಿಲಕ ಮತ್ತು ಕುಶಾಲ್ ಮೆಂಡಿಸ್‌ ಮೇಲೆ ಎರಡು ವರ್ಷಗಳ ನಿಷೇಧ ಹೇರಲು ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ (ಎಸ್‌ಎಲ್‌ಸಿ) ಶಿಸ್ತು ಸಮಿತಿಯು ಶಿಫಾರಸು ಮಾಡಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ನಿರೋಶನ್ ಡಿಕ್ವೆಲ್ಲಾ ಮೇಲೆ 18 ತಿಂಗಳ ನಿಷೇಧಕ್ಕೂ ಸಮಿತಿ ಶಿಫಾರಸು ಮಾಡಲಾಗಿದೆ. ಅಲ್ಲದೆ ಮೂವರಿಗೂ ₹ 18 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಜೂನ್ ತಿಂಗಳ ಅಂತ್ಯದಲ್ಲಿ ಮೂರು ಏಕದಿನ ಪಂದ್ಯಗಳನ್ನಾಡಲು ಶ್ರೀಲಂಕಾ ತಂಡವು ಇಂಗ್ಲೆಂಡ್‌ಗೆ ತೆರಳಿತ್ತು. ಸರಣಿ ಆರಂಭಕ್ಕೂ ಮೊದಲು ಈ ಮೂವರು ಆಟಗಾರರು ಡುರ್ಹಾಮ್‌ನಲ್ಲಿ ಬಯೋಬಬಲ್ ನಿಯಮ ಉಲ್ಲಂಘಿಸಿದ್ದು ವರದಿಯಾಗಿತ್ತು. ಆ ತಕ್ಷಣಕ್ಕೆ ಮೂವರನ್ನೂ ಅಮಾನತು ಮಾಡಿ ಶ್ರೀಲಂಕಾಕ್ಕೆ ಕಳುಹಿಸಲಾಗಿತ್ತು. ಪ್ರಕರಣದ ವಿಚಾರಣೆಗಾಗಿ ಐದು ಸದಸ್ಯರ ಶಿಸ್ತು ಸಮಿತಿಯನ್ನು ರಚಿಸ ಲಾಗಿತ್ತು. ಸಮಿತಿಯ ಶಿಫಾರಸುಗಳಿಗೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ ಕಾರ್ಯ ಕಾರಿ ಸಮಿತಿ ಅನುಮೋದನೆ ನೀಡಿದರೆ ಮಾತ್ರ ಈ ಶಿಕ್ಷೆ ಜಾರಿಯಾಗಲಿದೆ ಎಂದು ಎಸ್‌ಎಲ್‌ಸಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.