ವಿರಾಟ್ ನಾಯಕತ್ವ ಬಿಡುವುದಕ್ಕೂ ಸೋಲಿಗೂ ಸಂಬಂಧವಿಲ್ಲ: ಆರ್‌ಸಿಬಿ ಮುಖ್ಯ ಕೋಚ್ ಅಬುಧಾಬಿ (ಪಿಟಿಐ): ಕೋಲ್ಕತ್ತ ನೈಟ್ ರೈಡರ್ಸ್‌ ಎದುರಿನ ಸೋಲಿಗೂ, ಈ ಐಪಿಎಲ್ ನಂತರ ವಿರಾಟ್ ಕೊಹ್ಲಿ ನಾಯಕತ್ವ ಬಿಡುವುದಾಗಿ ಹೇಳಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಹೇಳಿಕೆಯು ತಂಡದ ಆಟಗಾರರ ಮೇಲೆ ಪರಿಣಾಮ ಬೀರಿದೆ ಎಂಬುದು ಸರಿಯಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಮೈಕ್ ಹೆಸನ್ ಸ್ಪಷ್ಟಪಡಿಸಿದ್ದಾರೆ. ‘ವಿರಾಟ್ ನೀಡಿರುವ ಹೇಳಿಕೆ ನೀಡುವುದಕ್ಕೂ ಮುನ್ನವೇ ತಂಡದ ಬಹುತೇಕ ಆಟಗಾರರಿಗೆ ವಿಷಯ ತಿಳಿದಿತ್ತು. ಈ ಕುರಿತು ಸಾಕಷ್ಟು ಚರ್ಚೆಗಳೂ ನಡೆದಿದ್ದವು. ಆದ್ದರಿಂದ ಅಂತಹ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಆದರೆ, ಪಂದ್ಯದಲ್ಲಿ ನಾವು ಸೋಲಲು ಕಾರಣ ಬ್ಯಾಟಿಂಗ್‌ನಲ್ಲಿ ಹಿಂದುಳಿದಿದ್ದು ಕಾರಣ’ ಎಂದರು. ‘ತಂಡದಲ್ಲಿ ಬಹಳ ಪ್ರತಿಭಾನ್ವಿತ ಆಟಗಾರರು ಇದ್ದಾರೆ. ತ್ವರಿತವಾಗಿ ಪುಟಿದೇಳುವ ಗುಣ ಅವರಲ್ಲಿದೆ. ಮುಂದಿನ ಹಂತದಲ್ಲಿ ಉತ್ತಮವಾಗಿ ಆಡಲಿದ್ದಾರೆ’ ಎಂದು ವಿಶ್ವಾಸವ್ಯಕ್ತಪಡಿಸಿದರು. ‘ಕೋಲ್ಕತ್ತದ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರ ಸ್ಪಿನ್‌ ಬೌಲಿಂಗ್ ಎದುರಿಸುವುದು ತುಸು ಸವಾಲಿನ ಕೆಲಸ. ಅದಕ್ಕಾಗಿಯೇ ಒಂದರ ಹಿಂದೆ ಒಂದು ವಿಕೆಟ್ ಪತನವಾದವು’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.