ಮಹಿಳೆಯರ ಏಕದಿನ ರ‍್ಯಾಂಕಿಂಗ್‌: ಅಗ್ರ ಸ್ಥಾನದಲ್ಲಿ ಮಿಥಾಲಿ ದುಬೈ: ಮಹಿಳೆಯರ ಏಕದಿನ ರ‍್ಯಾಂಕಿಂಗ್‌ನ ಬ್ಯಾಟರ್‌ಗಳ ಪಟ್ಟಿಯಲ್ಲಿ ಮಿಥಾಲಿ ರಾಜ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಇಂಗ್ಲೆಂಡ್ ಎದುರಿನ ಮೊದಲ ಪಂದ್ಯದಲ್ಲಿ ಅಜೇಯ 79 ರನ್ ಗಳಿಸಿದ್ದ ನ್ಯೂಜಿಲೆಂಡ್‌ನ ಆ್ಯಮಿ ಸಟೆರ್ಥ್‌ವೇಟ್ ಅಗ್ರ ಐದರೊಳಗಿನ ಸ್ಥಾನಕ್ಕೆ ಮರಳಿದ್ದಾರೆ. ಐಸಿಸಿ ಮಂಗಳವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮಿಥಾಲಿ 762 ರ‍್ಯಾಂಕಿಂಗ್ ಪಾಯಿಂಟ್ ಹೊಂದಿದ್ದಾರೆ. ಅವರ ಜೊತೆ ಮೊದಲ ಸ್ಥಾನ ಹಂಚಿಕೊಂಡಿದ್ದ ದಕ್ಷಿಣ ಆಫ್ರಿಕಾದ ಲಿಜೆಲಿ ಲೀ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಸ್ಮೃತಿ ಮಂದಾನ ಏಳನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ 89 ರನ್ ಕಲೆ ಹಾಕಿದ್ದ ಇಂಗ್ಲೆಂಡ್ ನಾಯಕಿ ಹೀಥರ್ ನೈಟ್ ಐದು ಸ್ಥಾನಗಳ ಏರಿಕೆ ಕಂಡಿದ್ದು ಒಂಬತ್ತನೇ ಸಂಖ್ಯೆಯಲ್ಲಿದ್ದಾರೆ. ನಥಾಲಿ ಶೀವರ್ ಮತ್ತು ಲಾರಾ ವೊಲ್ವಾರ್ಟ್ ಕೂಡ ಹೀಥರ್ ಜೊತೆ ಸ್ಥಾನ ಹಂಚಿಕೊಂಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭಾರತದ ಜೂಲನ್ ಗೋಸ್ವಾಮಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಸ್ಪಿನ್ನರ್ ಪೂನಂ ಯಾದವ್ ಒಂಬತ್ತನೇ ಸ್ಥಾನದಲ್ಲೇ ಉಳಿದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.