-2020 | : ನಿರಾಳ ಮುಂಬೈಗೆ ಡೆಲ್ಲಿ ಸವಾಲು ದುಬೈ: ಪ್ಲೇ ಆಫ್‌ನಲ್ಲಿ ಈಗಾಗಲೇ ಸ್ಥಾನ ಖಚಿತಪಡಿಸಿಕೊಂಡು ನಿರಾಳವಾಗಿರುವ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ ಟೂರ್ನಿಯಲ್ಲಿ ಶನಿವಾರ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಸತತ ಮೂರು ಪಂದ್ಯಗಳಲ್ಲಿ ಸೋಲಿನ ಕಹಿ ಉಂಡಿರುವ ಶ್ರೇಯಸ್‌ ಅಯ್ಯರ್ ಬಳಗ ಗೆಲುವಿನ ಮೂಲಕ ಪ್ಲೇ ಆಫ್‌ಗೆ ಲಗ್ಗೆಯಿಡುವ ಹಂಬಲದಲ್ಲಿದೆ. ಹಾಲಿ ಚಾಂಪಿಯನ್‌ ಆಗಿರುವ ರೋಹಿತ್‌ ಶರ್ಮಾ ಪಡೆಯ ಬಳಿ ಸದ್ಯ 16 ಪಾಯಿಂಟ್ಸ್‌ಗಳಿವೆ. ಗುರುವಾರ ಕೋಲ್ಕತ್ತ ನೈಟ್‌ ರೈಡರ್ಸ್ (ಕೆಕೆಆರ್‌) ವಿರುದ್ಧದ ಪಂದ್ಯದಲ್ಲಿ ಚೆನ್ನೈ ಗೆಲುವು ಸಾಧಿಸುವುದರೊಂದಿಗೆ, ರನ್‌ರೇಟ್ ಆಧಾರದಲ್ಲಿ ಮುಂಬೈ ಪ್ಲೇ ಆಫ್‌ ಅರ್ಹತೆ ಪಡೆದ ಮೊದಲ ತಂಡ ಎನಿಸಿಕೊಂಡಿತ್ತು. ಸತತ ಮೂರು ಪ‍ಂದ್ಯಗಳಲ್ಲಿ ಕ್ರಮವಾಗಿ ಕಿಂಗ್ಸ್ ಇಲೆವನ್‌ ಪಂಜಾಬ್‌, ಕೆಕೆಆರ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಸೋಲಿನ ಬಳಿಕವೂ ಡೆಲ್ಲಿ ಕ್ಯಾಪಿಟಲ್ಸ್ 14 ಪಾಯಿಂಟ್‌ನೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಸೋಲುಗಳಿಂದ ಎಚ್ಚೆತ್ತುಕೊಂಡಿರುವ ಅದು ಜಯದ ಹಾದಿಗೆ ಮರಳುವ ವಿಶ್ವಾಸದಲ್ಲಿದೆ. ಹೀಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಯುವ ನಿರೀಕ್ಷೆ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.