ಗಾಯದಿಂದ ಸಂಪೂರ್ಣ ಗುಣಮುಖನಾಗಿದ್ದೇನೆ: ರೋಹಿತ್‌ ಶರ್ಮಾ ಶಾರ್ಜಾ: ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ತಾನು ಸಂಪೂರ್ಣ ಗುಣಮುಖನಾಗಿದ್ದೇನೆ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ. ಗಾಯಗೊಂಡ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಂಡಿದ್ದ ಅವರು, ಮಂಗಳವಾರನಡೆದ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಆಡಿದ್ದರು. ಗಾಯ ಹಾಗೂ ಫಿಟ್‌ನೆಸ್‌ ಕಾರಣದಿಂದಲೇ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಆಯ್ಕೆ ಮಾಡಿಲ್ಲ. ಹೈದರಾಬಾದ್‌ ಎದುರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 10 ವಿಕೆಟ್‌ಗಳಿಂದ ಸೋತಿತ್ತು. ‘ಆಟಕ್ಕೆ ಮರಳಿದ್ದು ಸಂತಸ ತಂದಿದೆ. ಐಪಿಎಲ್‌ ಟೂರ್ನಿಯಲ್ಲಿ ಇನ್ನಷ್ಟು ಪಂದ್ಯಗಳನ್ನು ಆಡಲು ಎದುರು ನೋಡುತ್ತಿರುವೆ. ಏನಾಗುತ್ತದೆಯೋ ಕಾದು ನೋಡೋಣ. ಗಾಯದಿಂದ ಈಗ ಸಂಪೂರ್ಣ ಗುಣಮುಖನಾಗಿದ್ದೇನೆ‘ ಎಂದು ಪಂದ್ಯದ ಬಳಿಕ ರೋಹಿತ್‌ ಹೇಳಿದರು. ‘ಕಿಂಗ್ಸ್ ಇಲೆವನ್‌ ಪಂಜಾಬ್‌ ತಂಡದ ವಿರುದ್ಧ ಅಕ್ಟೋಬರ್‌ 18ರಂದು ನಡೆದ ಪಂದ್ಯದಲ್ಲಿ ರೋಹಿತ್ ಎಡಗಾಲಿಗೆ ಗಾಯವಾಗಿತ್ತು‘ ಎಂದು ಮುಂಬೈ ತಂಡದ ಆಡಳಿತ ಮಂಡಳಿ ಹೇಳಿದೆ. ‘ರೋಹಿತ್‌ ಗುಣಮುಖರಾಗಿ ಆಟಕ್ಕೆ ಮರಳಿದ್ದು ಭಾರತೀಯ ಕ್ರಿಕೆಟ್‌ಗೆ ಸಂತಸದ ಸಂಗತಿ‘ ಎಂದು ಮಾಜಿ ಕ್ರಿಕೆಟಿಗ ಸುನಿಲ್‌ ಗಾವಸ್ಕರ್‌ ಅಭಿಪ್ರಾಯಪಟ್ಟಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.