| ಆಟದ ಮನೆ: ಐಪಿಎಲ್‌ನ ‘ಮುದಿಹುಡುಗರು’! ಐಪಿಎಲ್‌ನಲ್ಲಿ ಮೂವತ್ತಮೂರು, ಮೂವತ್ತನಾಲ್ಕು ದಾಟಿದವರಷ್ಟೇ ಅಲ್ಲ ಮೂವತ್ತೇಳು ವಯಸ್ಸಾದವರೂ ಕಣ್ಣುಕೋರೈಸುವಂತೆ ಆಡಿರುವ ಹಲವು ಉದಾಹರಣೆಗಳಿವೆ. ಈ ಬಾರಿಯೂ ಅಂತಹ ಝಲಕ್‌ಗಳು ನೋಡಲು ಸಿಕ್ಕವು. ದೇಹ ದಣಿಯುವ ವಯಸ್ಸಿನಲ್ಲೂ ಅನುಭವ, ಆಟಪ್ರೀತಿಯನ್ನೆ ನೆಚ್ಚಿಕೊಂಡು ಆಡುವವರ ನೆನಕೆ ಇಲ್ಲಿದೆ... ಶಾರ್ಜಾದಲ್ಲಿ ನವೆಂಬರ್ 3ರ ಮಂಗಳವಾರ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಒಂದೂ ವಿಕೆಟ್ ಕಳೆದುಕೊಳ್ಳದೆ ಕಳೆದ ಸಲದ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ, ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ ಪ್ಲೇಆಫ್ ಹಂತಕ್ಕೆ ಪ್ರವೇಶಿಸಿತು. ಸನ್‌ರೈಸರ್ಸ್ ‘ಅಂಡರ್‌ಡಾಗ್’ ಎನಿಸಿಕೊಂಡಿರುವ ತಂಡ. ಅದಕ್ಕೆ ಚರಿಷ್ಮಾ ಇಲ್ಲ. ನಾಯಕ ಡೇವಿಡ್ ವಾರ್ನರ್ ಆಸ್ಟ್ರೇಲಿಯಾದವರು. ಫಳಫಳ ಹೊಳೆಯುವ ಜನಪ್ರಿಯತೆ ಇರುವವರು ಅಲ್ಲಿ ಕಡಿಮೆಯೇ. ಮೂವತ್ತನಾಲ್ಕು ವರ್ಷ ದಾಟಿದ ವಾರ್ನರ್ ಹಾಗೂ ಇದೇ ವರ್ಷದ ಅಕ್ಟೋಬರ್ 24ರಂದು 37ನೇ ಹುಟ್ಟುಹಬ್ಬ ಆಚರಿಸಿಕೊಂಡ ವೃದ್ಧಿಮಾನ್ ಸಹಾ ಇಬ್ಬರೂ ತಮ್ಮ ತಂಡವನ್ನು ಮುಂದಿನ ನಿಲ್ದಾಣಕ್ಕೆ ಕೊಂಡೊಯ್ದರು. ಬಂಗಾಳಿ ಹುಡುಗ ಎಂದು ವೃದ್ಧಿಮಾನ್ ಸಹಾ ಅವರನ್ನು ಕರೆಯುತ್ತಿದ್ದ ಕಾಲವೀಗ ಹನ್ನೆರಡು ವರ್ಷಗಳಷ್ಟು ಸವೆದಿದೆ. ಜಾನಿ ಬೇಸ್ಟೊ ಎನ್ನುವ ಸಮಕಾಲೀನ ತಾರೆಯನ್ನು ನೆಚ್ಚಿಕೊಂಡಿದ್ದ ಸನ್‌ರೈಸರ್ಸ್‌ಗೆ ಇಂಥದೊಂದು ಘಟ್ಟಕ್ಕೆ ಬಂದು ನಿಲ್ಲಲು ‘ಮುದಿಹುಡುಗ’ ವೃದ್ಧಿಮಾನ್ ಸಹಾ ಬೇಕಾಗಿ ಬಂದದ್ದು ಚೋದ್ಯವೆನ್ನಿಸಿದರೂ ಸತ್ಯ. ರಣಜಿ ಪದಾರ್ಪಣೆ ಪಂದ್ಯದಲ್ಲೇ ಶತಕ ಹೊಡೆದು ತನ್ನ ಬ್ಯಾಟಿಂಗ್ ಪ್ರತಿಭೆಯನ್ನು ತೋರಿಸಿದ್ದ ವೃದ್ಧಿಮಾನ್ ಸಹಾ ಅಂತರರಾಷ್ಟ್ರೀಯ ಕ್ರಿಕೆಟಿಗನಾಗಿ ಮಬ್ಬು. ದೀಪ್‌ದಾಸ್‌ ಗುಪ್ತಾ ಬಿಸಿಸಿಐ ಬಿಯಮ ಉಲ್ಲಂಘಿಸಿ ಐಸಿಎಲ್ (ಇಂಡಿಯನ್ ಕ್ರಿಕೆಟ್ ಲೀಗ್) ಆಡಲು ಹೋದಾಗ ವೃದ್ಧಿಮಾನ್‌ಗೆ ದೇಶದ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗುವ ಅವಕಾಶ ಬಂತು. ಒಮ್ಮೆ ರೋಹಿತ್ ಶರ್ಮ, ಮತ್ತೊಮ್ಮೆ ಧೋನಿ ಗಾಯಾಳುಗಳಾದಾಗ ಆಡುವ ಅವಕಾಶ ಸಿಕ್ಕಿತಷ್ಟೆ. ಆದರೆ, 2009–10ರ ರಣಜಿ ಋತುವಿನಲ್ಲಿ ಐದೇ ಪಂದ್ಯಗಳಲ್ಲಿ 318 ರನ್‌ಗಳನ್ನು ಅವರು ಗಳಿಸಿದ್ದರು. ಅದನ್ನು ನೋಡಿಯೇ ಅವರು ಐಪಿಎಲ್‌ ಮೊದಲ ಋತುವಿನಲ್ಲಿಯೇ ಹರಾಜಿನಲ್ಲಿ ಅವಕಾಶ ಪಡೆದದ್ದು. ಈ ಸಲ ಮೂವತ್ತು ದಾಟಿದ ಬೇರ್‌ಸ್ಟೋಗೆ ಪಂದ್ಯಗಳನ್ನು ಗೆಲ್ಲಿಸಿಕೊಡಲು ಆಗಲಿಲ್ಲ. ಮೂವತ್ತೇಳರ ವೃದ್ಧಿಮಾನ್ ಅವಕಾಶವನ್ನು ವೃದ್ಧಿಸಿಕೊಂಡರು. ಅವರು ಇದುವರೆಗೆ ಆಡಿದ್ದು ಬರೀ ನಾಲ್ಕು ಪಂದ್ಯಗಳನ್ನು. 71.33ರ ಸರಾಸರಿಯಲ್ಲಿ 214 ರನ್‌ಗಳನ್ನು 139.86 ಸ್ಟ್ರೈಕ್‌ರೇಟ್‌ನಲ್ಲಿ ಗಳಿಸಿಕೊಟ್ಟರು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ, ರನ್‌ ಗಳಿಸುವುದು ಕಠಿಣ ಎನ್ನುವಂತಹ ಪಿಚ್‌ನಲ್ಲಿ ನೆಲೆಯೂರಿ ಅವರು ತಾಳ್ಮೆಯಿಂದ ಆಡಿದ್ದನ್ನು ಕಂಡೆವು. ವಿಕೆಟ್‌ ಉಳಿಸಿಕೊಂಡೇ ಆಕ್ರಮಣಕಾರಿಯೂ ಆಗಬಲ್ಲ ವೃದ್ಧಿಮಾನ್‌ ಬೆನ್ನಿಗೆ ಅನುಭವವಿದೆ. ಚುಟುಕು ಕ್ರಿಕೆಟ್‌ಗೆ ಇಂತಹ ತಣ್ಣಗಿನ ‘ಕಲಾವಿದ’ರು ಯಾವತ್ತೂ ಬೇಕಾಗಿರುತ್ತಾರೆ. ಚುಟುಕು ಕ್ರಿಕೆಟ್‌ನಲ್ಲಿ ವಯಸ್ಸಿನ ಕುರಿತು ಈಗ ಚರ್ಚೆ ನಡೆಯುತ್ತಿವೆ. ವಿಶೇಷವಾಗಿ ಚೆನ್ನೈ ಸೂಪರ್‌ಕಿಂಗ್ಸ್‌ ತಂಡವನ್ನು ‘ಡ್ಯಾಡೀಸ್ ಸ್ವ್ಕ್ಯಾಡ್’ ಎಂದು ಕೆಲವರು ಗೇಲಿ ಮಾಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಮೂವತ್ತೊಂಬತ್ತರ ಹರೆಯದಲ್ಲಿ ಈ ಸಲ ತಡಕಾಡಿದ್ದನ್ನೇ ನೆಪವಾಗಿಸಿ ಹೀಗೆ ಕಾಲೆಳೆಯುವವರು ಇತಿಹಾಸವನ್ನು ಮರೆತುಬಿಟ್ಟಿರುತ್ತಾರೆ. ಹಾಗೆ ನೋಡಿದರೆ ಧೋನಿ ಆಟ ಕಳಪೆಯಾಗಿಯೇನೂ ಇರಲಿಲ್ಲ. ಅವರು 14 ಪಂದ್ಯಗಳಲ್ಲಿ 200 ರನ್‌ಗಳನ್ನಷ್ಟೇ ಹೊಡೆದಿದ್ದರೂ ಅವರ ರನ್‌ ಗಳಿಕೆಯ ಸರಾಸರಿ 25 ಇದೆ. 10 ಪಂದ್ಯಗಳಲ್ಲಿ 264 ರನ್‌ ಗಳಿಸಿದ ಮುಂಬೈನ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಪ್ರದರ್ಶನಕ್ಕೆ ಹೋಲಿಸಿ ನೋಡಿದರೆ ಇದು ತೀರಾ ಸಪ್ಪೆಯೇನೂ ಅಲ್ಲ. ವಯಸ್ಸಿನ ಕುರಿತು ಇಷ್ಟೆಲ್ಲ ಮಾತಾಗುತ್ತಿರುವಾಗಲೇ, ವಾರ್ನರ್ 34ರ ವಯಸ್ಸಿನಲ್ಲೂ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಯಾದಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 14 ಪಂದ್ಯಗಳಲ್ಲಿ 529 ರನ್‌ಗಳನ್ನು 44.08ರ ಸರಾಸರಿಯಲ್ಲಿ ಗಳಿಸಿರುವ ಅವರು ಕಳೆದ ಎರಡು ಐಪಿಎಲ್ ಋತುಗಳಲ್ಲಿಯೂ ಕ್ರಮವಾಗಿ 692, 641 ರನ್‌ಗಳನ್ನು ಕಲೆಹಾಕಿದ್ದರು. ಮುಪ್ಪಡರುತ್ತಾ ಬಂದಂತೆ ಅವರ ಆಟಕ್ಕೆ ಅನುಭವದ ಹದ ಬೆರೆತುಕೊಳ್ಳುವುದನ್ನು ನಾವು ಗಮನಿಸಬೇಕಿದೆ. ಮಹಾನ್ ದಾಳಿಕೋರನಂತೆ ಇದ್ದ ಅವರು ಈ ಬಾರಿ ತುಸು ಸಂಯಮವನ್ನು ಬೆರೆಸಿದಂತೆ ಆಡಿದರು. ಹಾಗೆ ನೋಡಿದರೆ ಸಚಿನ್ ತೆಂಡೂಲ್ಕರ್ ಮೊದಲ ಐಪಿಎಲ್ ಆಡಿದಾಗ ಅವರಿಗೆ ಮೂವತ್ತೈದು ದಾಟಿತ್ತು. ಹಾಗಿದ್ದೂ ಒಂದು ಇನಿಂಗ್ಸ್‌ನಲ್ಲಿ ಬರೀ 69 ಎಸೆತಗಳಲ್ಲಿ 132 ರನ್ ಗಳಿಸಿ ತಮ್ಮ ಆಟಕ್ಕಿನ್ನೂ ಮುಪ್ಪಡರಿಲ್ಲ ಎಂದು ಸಾಬೀತುಪಡಿಸಿದ್ದರು. 78 ಐಪಿಎಲ್‌ ಪಂದ್ಯಗಳಲ್ಲಿ ಅವರು 2,334 ರನ್‌ಗಳನ್ನು 34.84ರ ಸರಾಸರಿಯಲ್ಲಿ ದಾಖಲಿಸಿರುವುದಕ್ಕೂ ಅಡಿಗೆರೆ ಎಳೆಯಬೇಕು. ಕ್ರಿಕೆಟ್‌ನಲ್ಲಿ ದೀರ್ಘಾವಧಿ ಆಡುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಮೇಲುನೋಟಕ್ಕೆ ಎಲ್ಲರಿಗಿಂತ ಹೆಚ್ಚು ಅವಧಿ ಸಚಿನ್ ಆಡಿದ್ದಾರೆ ಎಂದು ನಾವಂದುಕೊಂಡಿದ್ದೇವೆ. ಆದರೆ, ಅದು ನಿಜವಲ್ಲ. ಇಂಗ್ಲೆಂಡ್‌ನ ವಿಲ್‌ಫ್ರೆಡ್‌ ರೋಡ್ಸ್ 30 ವರ್ಷ 315 ದಿನಗಳಷ್ಟು ಕಾಲ ಕ್ರಿಕೆಟ್‌ ಆಡಿರುವುದನ್ನು ನೋಡಿದರೆ ಯುವಕರ ಕಣ್ಣುಗಳೆಲ್ಲ ಅಗಲವಾಗಬೇಕು. ಸಚಿನ್ ತಮ್ಮ 24 ವರ್ಷಗಳ ದೀರ್ಘಾವಧಿ ಕ್ರಿಕೆಟ್ ಬದುಕಿನಲ್ಲಿ 664 ಪಂದ್ಯಗಳನ್ನು ಆಡಿದ್ದಾರೆ. ಅಷ್ಟೊಂದು ಸಂಖ್ಯೆಯ ಪಂದ್ಯಗಳನ್ನು ಆಡಿರುವ ದಾಖಲೆ ಯಾರೊಬ್ಬರ ಹೆಸರಿನಲ್ಲೂ ಇಲ್ಲ. ಅವರೆಲ್ಲ ನೂರು ಪಂದ್ಯಗಳಿಗಿಂತ ಹೆಚ್ಚು ಆಡಿಯೂ ಇಲ್ಲ. ಯಾಕೆಂದರೆ, ಅವರಲ್ಲಿ ಬಹುತೇಕರು ಏಕದಿನ ಪಂದ್ಯಗಳ ಜಮಾನಾದವರು ಅಲ್ಲ. 1950ರ ದಶಕದಲ್ಲಿ ಆಡಿದ ಇಂಗ್ಲೆಂಡ್‌ನ ಟೆಸ್ಟ್‌ ಕ್ರಿಕೆಟಿಗ ಫ್ರೆಡ್ಡಿ ಬ್ರೌನ್ ವೃತ್ತಿಪರ ಆಟದ ಅವಧಿ 21 ವರ್ಷ 336 ದಿನಗಳು. ಅದೇ ದೇಶದ ಸಿಡ್ನಿ ಗ್ರೆಗರಿ 22 ವರ್ಷ, 32 ದಿನಗಳಷ್ಟು ದೀರ್ಘಾವಧಿ ಆಟ ತೋರಿದವರು. ಜಾರ್ಜ್ ಗನ್ 22 ವರ್ಷ 120 ದಿನಗಳಷ್ಟು ಅವಧಿ ಆಡಿದ ಮೇಲೆ ನಿವೃತ್ತಿ ಪಡೆದ ಇಂಗ್ಲೆಂಡ್‌ನ ಆಟಗಾರ. ಸರ್ ಜೇಕಬ್ ಹಾಬ್ಸ್‌ 22 ವರ್ಷ 233 ದಿನಗಳಷ್ಟು. ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ಎರಡೂ ದೇಶಗಳ ಪರವಾಗಿ ಆಡಿದ ಜಾನ್ ಟ್ರೈಕೋಸ್ 23 ವರ್ಷ 40 ದಿನಗಳಷ್ಟು ಕಾಲ ಕ್ರಿಕೆಟ್‌ ಅಂಗಣದಲ್ಲಿ ಹೆಸರು ಉಳಿಸಿದವರು. ವಿಂಡೀಸ್‌ನ ಜಾರ್ಜ್ ಹೆಡ್ಲಿ ಕ್ರಿಕೆಟ್ ವೃತ್ತಿಬದುಕಿನ ಅವಧಿ 24 ವರ್ಷ 10 ದಿನಗಳು. ಸಚಿನ್ ವೃತ್ತಿಬದುಕಿನ ಕಾಲಾವಧಿಗಿಂತ (24 ವರ್ಷ, 1 ದಿನ) ಇದು ತುಸು ಹೆಚ್ಚಷ್ಟೆ. ಇಂಗ್ಲೆಂಡಿನವರೇ ಆದ ಫ್ರಾಂಕ್ ವೂಲಿ (25 ವರ್ಷ, 13 ದಿನ), ಡೆನಿಸ್ ಬ್ರಯಾನ್ ಕ್ಲೋಸ್ (26 ವರ್ಷ, 356 ದಿನ) ಬಹುಕಾಲ ಕ್ರಿಕೆಟ್ ಆಡಿದವರು. ಸಚಿನ್ ಐಪಿಎಲ್‌ನಲ್ಲಿ ಏಕೈಕ ಶತಕ ಹೊಡೆದಾಗ ಅವರಿಗೆ 38 ವರ್ಷ ವಯಸ್ಸಾಗಿತ್ತು. 2011ರ ಏಪ್ರಿಲ್ 15ರಂದು ಕೊಚ್ಚಿ ಟಸ್ಕರ್ಸ್ ತಂಡದ ವಿರುದ್ಧ 66 ಎಸೆತಗಳಲ್ಲಿ ಅವರು ಶತಕ ಹೊಡೆದಿದ್ದರು. ಆಗ ಅವರೊಟ್ಟಿಗೆ ಎರಡನೇ ವಿಕೆಟ್ ಜತೆಯಾಟದಲ್ಲಿ 116 ರನ್‌ ಬರಲು ಕಾರಣರಾಗಿದ್ದವರು ಅಂಬಟಿ ರಾಯುಡು. ಈಗ ರಾಯುಡು ಅವರಿಗೆ ಮೂವತ್ತನಾಲ್ಕರ ಪ್ರಾಯ. 12 ಪಂದ್ಯಗಳಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ 359 ರನ್‌ಗಳನ್ನು 39.88ರ ಸರಾಸರಿಯಲ್ಲಿ ಗಳಿಸಿದ್ದು ಅನುಭವ ಎನ್ನುವುದು ಮುಪ್ಪಲ್ಲ ಎನ್ನುವುದನ್ನು ಸಾಬೀತುಪಡಿಸಿತು. ಇನ್ನೂ ಮೂವತ್ತು ದಾಟದ ಕರುಣ್ ನಾಯರ್‌ ಆಡಲು ಸಾಧ್ಯವಾದದ್ದು ಬರೀ ನಾಲ್ಕು ಪಂದ್ಯಗಳನ್ನು. ಅವರ ಕೊರತೆಯನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಯಾರು ತುಂಬಿಕೊಟ್ಟಾರು ಎಂದುಕೊಳ್ಳುವಾಗಲೇ ಕ್ರಿಸ್ ಗೇಲ್ ತರಹದ 41ರ ತರುಣ ಕಾಣಿಸಿದರು. ಕಳೆದ ಸಲ ಔಟಾಗದೆ ಒಂದು ಇನಿಂಗ್ಸ್‌ನಲ್ಲಿ 99 ರನ್ ಗಳಿಸಿ ನಿರಾಶರಾಗಿದ್ದ ಗೇಲ್, ಈ ಬಾರಿಯೂ ಒಮ್ಮೆ 99ಕ್ಕೆ ಔಟಾಗಿ ಬ್ಯಾಟ್ ಎಸೆದದ್ದನ್ನು ನಾವು ಕಂಡೆವು. ಈ ವಯಸ್ಸಿನಲ್ಲಿ ಅವರು 7 ಪಂದ್ಯಗಳಲ್ಲಿ 288 ರನ್‌ಗಳನ್ನು ಜಮೆ ಮಾಡಿ ‘ದಿ ಬಾಸ್’ ಎಂಬ ತಮ್ಮ ಬ್ಯಾಟನ್ನು ತೋರಿಸಿದರು. ಮೂವತ್ತಮೂರು ದಾಟಿದ ಕೀರನ್ ಪೊಲಾರ್ಡ್ 86.33ರ ಅತ್ಯುತ್ತಮ ಸರಾಸರಿಯಲ್ಲಿ 259 ರನ್‌ಗಳನ್ನು ಈ ಸಲ ಕಲೆಹಾಕಿದರು. ಹೋದ ಋತುವಿನಲ್ಲಿ 279 ರನ್‌ಗಳನ್ನು ಗಳಿಸಿದ್ದ ಅವರ ಆಟ ಈ ಬಾರಿ ಇನ್ನೂ ಬಾಕಿ ಇದೆ. ಮೂವತ್ತಾರು ದಾಟಿದ ಎ.ಬಿ. ಡಿವಿಲಿಯರ್ಸ್ 44.22ರ ಸರಾಸರಿಯಲ್ಲಿ ಈ ಐಪಿಎಲ್‌ನಲ್ಲಿ ಇದುವರೆಗೆ 398 ರನ್‌ಗಳನ್ನು ಸೇರಿಸಿದರು. ಕಳೆದ ಎರಡು ಋತುಗಳಿಗೆ ಹೋಲಿಸಿದರೆ (442 ಹಾಗೂ 480) ಇದು ಕಡಿಮೆಯೇನೋ ಹೌದು. ಆದರೆ, ಅವರು ಪಂದ್ಯಗಳನ್ನು ಎದುರಾಳಿ ಬೌಲರ್‌ಗಳಿಂದ ಕಿತ್ತುಕೊಳ್ಳಬಲ್ಲರು ಎನ್ನುವುದನ್ನು ಈ ಮಾಗಿದ ವಯಸ್ಸಿನಲ್ಲೂ ತೋರಿಸಿರುವುದನ್ನು ಮೆಚ್ಚಲೇಬೇಕು. ಇವರಿಗಿಂತ ಪ್ರಾಯದಲ್ಲಿ ಚಿಕ್ಕವರಾದ ರಾಬಿನ್ ಉತ್ತಪ್ಪ (35 ವರ್ಷ) ರನ್‌ ಗಳಿಕೆಯ ಸರಾಸರಿ ಬರೀ 16.33 . ದಿನೇಶ್ ಕಾರ್ತಿಕ್ (34 ವರ್ಷ) ಗಳಿಕೆಯ ಸರಾಸರಿ 14.08. ‘ವಾಟೊ’ ಎಂದೇ ಆಪ್ತೇಷ್ಟರಿಂದ ಕರೆಸಿಕೊಳ್ಳುವ ಶೇನ್ ವಾಟ್ಸನ್ ಈ ಬಾರಿ ತುಂಬಾ ಚೆನ್ನಾಗಿ ಆಡಲಿಲ್ಲ ಎನ್ನುವುದೇನೋ ನಿಜ. ಆದರೆ, 11 ಇನಿಂಗ್ಸ್‌ಗಳಲ್ಲಿ 29.9ರ ಸರಾಸರಿಯಲ್ಲಿ 299 ರನ್‌ಗಳನ್ನು ಕಲೆಹಾಕಿದ್ದು ಕಳಪೆಯಂತೂ ಅಲ್ಲ. ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದು ತಮ್ಮ ವಾರಗೆಯ ಧೋನಿ ಕಡೆ ಸಂತೃಪ್ತಿ ನಗು ಬೀರುತ್ತಿದ್ದಾರೆ. ಪ್ಲೇಆಫ್ ಹಂತದ ನಂತರದ ಪಂದ್ಯಗಳಲ್ಲಿ ಮೂವತ್ತೆರಡು ದಾಟಿದ ಆಟಗಾರರು ಹೇಗೆಲ್ಲ ಆಡುವರೋ ನೋಡಬೇಕು. ಅನುಭವ, ಕೌಶಲ, ಪಂದ್ಯಪ್ರೀತಿ, ಫಿಟ್‌ನೆಸ್ ಇವಿಷ್ಟೂ ಇದ್ದರೆ ವಯಸ್ಸನ್ನೂ ಮರೆಸುವಂತೆ ಆಡಬಹುದು ಎನ್ನುವುದಂತೂ ಸುಳ್ಳಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.