ಎಲ್‌ಪಿಎಲ್‌: ಸೋಹೈಲ್‌ ತನ್ವೀರ್‌ಗೆ ಕೋವಿಡ್‌–19 ದೃಢ ಕೊಲಂಬೊ: ಪಾಕಿಸ್ತಾನದ ವೇಗದ ಬೌಲರ್‌ ಸೋಹೈಲ್‌ ತನ್ವೀರ್‌ ಹಾಗೂ ಕೆನಡಾದ ಬ್ಯಾಟ್ಸ್‌ಮನ್‌ ರವೀಂದ್ರ ಪಾಲ್‌ ಸಿಂಗ್‌ ಅವರಲ್ಲಿ ಕೋವಿಡ್‌–19 ಇರುವುದು ದೃಢಪಟ್ಟಿದೆ. ಇದೇ 26ರಿಂದ ನಡೆಯಬೇಕಿರುವ ಲಂಕಾ ಪ್ರೀಮಿಯರ್‌ ಲೀಗ್‌ (ಎಲ್‌ಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಇವರಿಬ್ಬರು ಆಡಬೇಕಿತ್ತು. ‘ಎಲ್‌ಪಿಎಲ್‌ ಟೂರ್ನಿಯಲ್ಲಿತನ್ವೀರ್‌ ಅವರು ಕ್ಯಾಂಡಿ ಟಸ್ಕರ್ಸ್‌ ಫ್ರ್ಯಾಂಚೈಸ್‌ ಪರ ಮತ್ತು ಸಿಂಗ್‌ ಅವರು ಕೊಲಂಬೊ ಕಿಂಗ್ಸ್ ತಂಡದಲ್ಲಿ ಆಡಲಿದ್ದರು.ಇವರಿಬ್ಬರನ್ನು ಶ್ರೀಲಂಕಾದಲ್ಲಿ ಶುಕ್ರವಾರ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ಇರುವುದು ಖಚಿತಪಟ್ಟಿದೆ‘ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್ಫೊ ವರದಿ ಮಾಡಿದೆ. ಪಾಕಿಸ್ತಾನದ ವಹಾಬ್‌ ರಿಯಾಜ್‌ ಹಾಗೂ ಇಂಗ್ಲೆಂಡ್‌ನ ಲಿಯಾಮ್‌ ಪ್ಲಂಕೆಟ್‌ ಅವರು ಟೂರ್ನಿಯಿಂದ ಹಿಂದೆ ಸರಿದ ಕಾರಣ ತನ್ವೀರ್‌ ಅವಕಾಶ ಪಡೆದಿದ್ದರು. ತನ್ವೀರ್‌ ಹಾಗೂ ಸಿಂಗ್‌ ಕನಿಷ್ಠ ಎರಡು ವಾರಗಳ ಕಾಲ ಟೂರ್ನಿಯಿಂದ ಹೊರಗುಳಿಯುವ ನಿರೀಕ್ಷೆಯಿದೆ. ಪ್ರಮುಖ ಆಟಗಾರರಾದ ಶ್ರೀಲಂಕಾ ವೇಗಿ ಲಸಿತ್‌ ಮಾಲಿಂಗ ಹಾಗೂ ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಕೂಡ ಈಗಾಗಲೇ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.