ಹುರುಪು ಮೂಡಿಸಿದ ರೋಹಿತ್ ಹಿತನುಡಿಗಳು: ಸೂರ್ಯ ಮುಂಬೈ: ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡದಲ್ಲಿ ಆಡುವ ಅವಕಾಶ ಲಭಿಸದ ಸಂದರ್ಭದಲ್ಲಿ ಬೇಸರವಾಗಿತ್ತು. ಆದರೆ ರೋಹಿತ್ ಶರ್ಮಾ ಅವರ ಹಿತನುಡಿಗಳು ತಮ್ಮಲ್ಲಿ ಮತ್ತೆ ಆತ್ಮವಿಶ್ವಾಸ ತುಂಬಿದವು ಎಂದು ಮುಂಬೈ ಆಟಗಾರ ಸೂರ್ಯಕುಮಾರ್ ಯಾದವ್ ಹೇಳಿದರು. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುವ ಸಂದರ್ಭದಲ್ಲಿ ಆಸ್ಟ್ರೇಲಿಯಾಗೆ ತೆರಳುವ ಭಾರತ ತಂಡದ ಆಯ್ಕೆಯಾಗಿತ್ತು. ಕಳೆದ ಕೆಲವು ವರ್ಷಗಳಿಂದ ದೇಶಿ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಉತ್ತಮವಾಗಿ ಆಡುತ್ತಿರುವ ಸೂರ್ಯಕುಮಾರ್ ಅವರು ತಮ್ಮ ಆಯ್ಕೆಯ ನಿರೀಕ್ಷೆಯಲ್ಲಿದ್ದರು. ಆದರೆ ಅವರನ್ನು ಪರಿಗಣಿಸಿರಲಿಲ್ಲ. ಈ ಕುರಿತು ಬಹಳಷ್ಟು ಚರ್ಚೆಗಳು ಆ ಸಂದರ್ಭದಲ್ಲಿ ನಡೆದಿದ್ದವು. ’ಅವತ್ತು ಜಿಮ್‌ನಲ್ಲಿ ನನ್ನೊಂದಿಗೆ ಕುಳಿತಿದ್ದ ರೋಹಿತ್ ಅವರ ಬಳಿ, ಒಳ್ಳೆಯ ಸುದ್ದಿಯೊಂದನ್ನು ನಿರೀಕ್ಷಿಸುತ್ತಿದ್ದೆ ಎಂದೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಅವರು, ನೀವು ಉತ್ತಮವಾದ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಮೇಲೆ ನನಗೆ ಅಪಾರ ವಿಶ್ವಾಸವಿದೆ. ನೀವು ಐಪಿಎಲ್‌ನಲ್ಲಿ ಮೊದಲಿನಿಂದ ಮಾಡುತ್ತ ಬಂದಿರುವುದನ್ನು ಈಗಲೂ ಮುಂದುವರಿಸಿ. ಮುಂದೊಂದು ದಿನ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತೆ ಎಂದು ಸಂತೈಸಿದ್ದರು. ಸಿಗುವ ಅವಕಾಶಗಳಲ್ಲಿ ಚೆನ್ನಾಗಿ ಆಡುತ್ತ ಸಾಗಿ ಎಂದ ಮಾತುಗಳು ನನ್ನಲ್ಲಿ ಹೊಸ ಹುಮ್ಮಸ್ಸು ತುಂಬಿದವು‘ ಎಂದು 30 ವರ್ಷದ ಸೂರ್ಯ ನೆನಪಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.