ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಅಜಿಂಕ್ಯ ರಹಾನೆ ಶತಕ ಸಿಡ್ನಿ (ಪಿಟಿಐ): ನಾಯಕ ಅಜಿಂಕ್ಯ ರಹಾನೆ ಸುಂದರ ಶತಕದ ಬಲದಿಂದ ಭಾರತ ಎ ತಂಡವು ಭಾನುವಾರ ಇಲ್ಲಿ ಆರಂಭವಾದ ಆಸ್ಟ್ರೇಲಿಯಾ ಎ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಗೌರವಾರ್ಹ ಮೊತ್ತ ಗಳಿಸಿತು. ಟಾಸ್ ಗೆದ್ದ ಭಾರತ ಎ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಆರಂಭಿಕ ಜೋಡಿ ಶುಭಮನ್ ಗಿಲ್ ಮತ್ತು ಪೃಥ್ವಿ ಶಾ ಅವರಿಬ್ಬರೂ ಖಾತೆಯನ್ನೇ ತೆರೆಯಲಿಲ್ಲ. ತಂಡದ ಮೊತ್ತವು ಆರು ರನ್‌ಗಳಾಗುಷ್ಟರಲ್ಲಿ ಇಬ್ಬರೂ ಪೆವಿಲಿಯನ್ ಸೇರಿದರು. ಚೇತೇಶ್ವರ್ ಪೂಜಾರ ಅರ್ಧಶತಕ (54; 140ಎಸೆತ) ಮತ್ತು ರಹಾನೆ ಶತಕದ (ಬ್ಯಾಟಿಂಗ್ 106; 228ಎ; 18 ಬೌಂಡರಿ 1ಸಿಕ್ಸರ್) ನೆರವಿನಿಂದ ತಂಡವು ದಿನದಾಟದ ಕೊನೆಗೆ 90 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 237 ರನ್ ಗಳಿಸಿತು. ಆಸ್ಟ್ರೇಲಿಯಾ ಎ ತಂಡದ ವೇಗಿ ಜೇಮ್ಸ್ ಪ್ಯಾಟಿನ್ಸನ್ ಮೂರು, ಮಿಚೆಲ್ ನೆಸೆರ್ ಎರಡು ಮತ್ತು ನಾಯಕ ಟ್ರಾವಿಸ್ ಹೆಡ್ ಎರಡು ವಿಕೆಟ್ ಗಳಿಸಿದರು. ಭಾರತ ಎ ತಂಡದಲ್ಲಿ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾಗೆ ಅವಕಾಶ ನೀಡಲಾಯಿತು. ರಿಷಭ್ ಪಂತ್ ವಿಶ್ರಾಂತಿ ಪಡೆದಿದ್ದಾರೆ. ಸಂಕ್ಷಿಪ್ತ ಸ್ಕೋರು: ಭಾರತ ಎ : 90 ಓವರ್‌ಗಳಲ್ಲಿ 8ಕ್ಕೆ 237 (ಚೇತೇಶ್ವರ್ ಪೂಜಾರ 54, ಹನುಮವಿಹಾರಿ 15, ಅಜಿಂಕ್ಯ ರಹಾನೆ ಬ್ಯಾಟಿಂಗ್ 108, ಕುಲದೀಪ್ ಯಾದವ್ 15, ಉಮೇಶ್ ಯಾದವ್ 54, ಜೇಮ್ಸ್‌ ಪ್ಯಾಟಿನ್ಸನ್ 58ಕ್ಕೆ3, ಮಿಚೆಲ್ ನೇಸೆರ್ 51ಕ್ಕೆ2, ಟ್ರಾವಿಸ್ ಹೆಡ್ 24ಕ್ಕೆ2) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.