ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಜಂಟಿ ಎರಡನೇ ಸ್ಥಾನದಲ್ಲಿ ಕೇನ್‌, ಕೊಹ್ಲಿ ದುಬೈ: ನ್ಯೂಜಿಲೆಂಡ್ ಕ್ರಿಕೆಟ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಅವರು ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಕೇನ್‌ ಜಂಟಿಯಾಗಿ ಈ ಸ್ಥಾನದಲ್ಲಿದ್ದಾರೆ. ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್‌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಚೇತೇಶ್ವರ್ ಪೂಜಾರ ಏಳನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ ವಿಭಾಗದಲ್ಲಿ ವೆಸ್ಟ್ ಇಂಡೀಸ್‌ ತಂಡದ ನಾಯಕ ಜೇಸನ್‌ ಹೋಲ್ಡರ್‌ ಅಗ್ರಸ್ಥಾನ ಕಳೆದುಕೊಂಡಿದ್ದು, ಆ ಸ್ಥಾನವು ಇಂಗ್ಲೆಂಡ್‌ ತಂಡದ ಬೆನ್‌ ಸ್ಟೋಕ್ಸ್ ಅವರ ಪಾಲಾಗಿದೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ತಂಡವು ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಇನಿಂಗ್ಸ್ ಮತ್ತು 134 ರನ್‌ಗಳಿಂದ ಸೋತಿತ್ತು. ಹೋಲ್ಡರ್ ಉತ್ತಮ ಸಾಮರ್ಥ್ಯ ತೋರಲು ವಿಫಲರಾಗಿದ್ದರು. ಈ ವಿಭಾಗದಲ್ಲಿ ಭಾರತದ ರವೀಂದ್ರ ಜಡೇಜ ಮೂರನೇ ಹಾಗೂ ರವಿಚಂದ್ರನ್ ಅಶ್ವಿನ್‌ ಆರನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ವಿಭಾಗದಲ್ಲಿ ಭಾರತದ ಜಸ್‌ಪ್ರೀತ್ ಬೂಮ್ರಾ 9ನೇ ಸ್ಥಾನದಲ್ಲಿದ್ದಾರೆ. ಅಶ್ವಿನ್‌ 11ನೇ ಹಾಗೂ ಮೊಹಮ್ಮದ್‌ ಶಮಿ 13ನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.