: ಜೆಮಿಸನ್ ದಾಳಿಗೆ ನಲುಗಿದ ವಿಂಡೀಸ್ ವೆಲ್ಲಿಂಗ್ಟನ್‌: ವೇಗದ ಬೌಲರ್‌ಗಳಾದ ಕೈಲ್ ಜೆಮಿಸನ್‌ (34ಕ್ಕೆ5) ಹಾಗೂ ಟಿಮ್ ಸೌಥಿ (29ಕ್ಕೆ 3) ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡವು ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಫಾಲೋ ಆನ್ ಭೀತಿಗೆ ಒಳಗಾಗಿದೆ. ಪಂದ್ಯದ ಎರಡನೇ ದಿನವಾದ ಶನಿವಾರ ಮೊದಲ ಇನಿಂಗ್ಸ್ ಮುಂದುವರಿಸಿದ ಆತಿಥೇಯ ತಂಡವು 460 ರನ್‌ ಗಳಿಸಿ ಎಲ್ಲ ವಿಕೆಟ್‌ಗಳನ್ನು ಒಪ್ಪಿಸಿತು. ಇದಕ್ಕುತ್ತರವಾಗಿ ಕೆರಿಬಿಯನ್ ಪಡೆ 8 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿದೆ. ಫಾಲೋ ಆನ್‌ ತಪ್ಪಿಸಿಕೊಳ್ಳಲು ಆ ತಂಡವು ಇನ್ನೂ 136 ರನ್‌ ಗಳಿಸಬೇಕಿದೆ. ಜೆಮಿಸನ್ ತಮ್ಮ ಮೊದಲ ಓವರ್‌ನಿಂದಲೇ ಪ್ರವಾಸಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾದರು. ಸತತ ಎರಡು ಎಸೆತಗಳಲ್ಲಿ ಜಾನ್ ಕ್ಯಾಂಪ್‌ಬೆಲ್‌ (14) ಹಾಗೂ ರಾಸ್ಟನ್ ಚೇಸ್‌ (0) ಅವರ ವಿಕೆಟ್ ಕಬಳಿಸಿದ ಅವರು ಹ್ಯಾಟ್ರಿಕ್ ಹಾದಿಯಲ್ಲಿದ್ದರು. ಆದರೆ ಮೂರನೇ ಎಸೆತದಲ್ಲಿ ಅವರ ಎಲ್‌ಬಿಡಬ್ಲ್ಯು ಮನವಿಯನ್ನು ಅಂಪೈರ್‌ ಪುರಸ್ಕರಿಸಲಿಲ್ಲ. ಜರ್ಮೈನ್ ಬ್ಲ್ಯಾಕ್‌ವುಡ್‌ (69), ಶಮ್ರಾ ಬ್ರೂಕ್ಸ್ (14) ಹಾಗೂ ಜಾನ್ ಕ್ಯಾಂಪ್‌ಬೆಲ್ ಅವರನ್ನು ಹೊರತುಪಡಿಸಿ ವಿಂಡೀಸ್‌ನ ಯಾರೂ ಎರಡಂಕಿ ಮೊತ್ತ ಗಳಿಸಲಿಲ್ಲ. ಶುಕ್ರವಾರ ಶತಕದೊಂದಿಗೆ ಅಜೇಯರಾಗುಳಿದಿದ್ದ ನ್ಯೂಜಿಲೆಂಡ್‌ ತಂಡದ ಹೆನ್ರಿ ನಿಕೋಲ್ಸ್ 174 ರನ್‌ ಗಳಿಸಿದರು. ನೀಲ್‌ ವ್ಯಾಗ್ನರ್‌ (ಔಟಾಗದೆ 66) ಅರ್ಧಶತಕ ಸಿಡಿಸಿದರು. ಸಂಕ್ಷಿಪ್ತ ಸ್ಕೋರ್/ ಮೊದಲ ಇನಿಂಗ್ಸ್ ನ್ಯೂಜಿಲೆಂಡ್‌ (ಶುಕ್ರವಾರ 6ಕ್ಕೆ 296): 114 ಓವರ್‌ಗಳಲ್ಲಿ 460 ಆಲೌಟ್‌ (ಹೆನ್ರಿ ನಿಕೋಲ್ಸ್ 174, ನೀಲ್‌ ವ್ಯಾಗ್ನರ್‌ ಔಟಾಗದೆ 66, ಕೈಲ್‌ ಜೆಮಿಸನ್ 20; ಶಾನನ್‌ ಗೇಬ್ರಿಯಲ್‌ 93ಕ್ಕೆ 3, ಅಲ್ಜರಿ ಜೋಸೆಫ್ 109ಕ್ಕೆ 3, ರಾಸ್ಟನ್ ಚೇಸ್‌ 54ಕ್ಕೆ 2). ವೆಸ್ಟ್ ಇಂಡೀಸ್‌: 52 ಓವರ್‌ಗಳಲ್ಲಿ 8 ವಿಕೆಟ್‌ಗೆ 124 (ಜರ್ಮೈನ್ ಬ್ಲ್ಯಾಕ್‌ವುಡ್‌ 69, ಜಾನ್ ಕ್ಯಾಂಪ್‌ಬೆಲ್‌ 14, ಶಮ್ರಾ ಬ್ರೂಕ್ಸ್ 14; ಕೈಲ್ ಜೆಮಿಸನ್ 34ಕ್ಕೆ 5, ಟಿಮ್ ಸೌಥಿ 29ಕ್ಕೆ 3). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.