ಪೊಲೀಸ್ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ: ಸಿಎಂ ಬಿ.ಎಸ್‌ ಯಡಿಯೂರಪ್ಪ ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಉದ್ಯೋಗಗಳಲ್ಲಿ ಶೇಕಡ ಎರಡರಷ್ಟು ಕ್ರೀಡಾ ಮೀಸಲಾತಿಯಲ್ಲಿ ನೇಮಕಾತಿ ಮಾಡಲು ಸರ್ಕಾರವು ತೀರ್ಮಾನಿಸಿದೆ ಬೇರೆ ಇಲಾಖೆ ಹಾಗೂ ನಿಗಮಗಳಲ್ಲಿಯೂ ಉದ್ಯೋಗ ಮೀಸಲಾತಿ ನೀಡುವ ಕುರಿತು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಶನಿವಾರ ಕಂಠೀರವ ಕ್ರೀಡಾಂಗಣದ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಹಾಲ್‌ ಆಫ್ ಫೇಮ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ’ರಾಜ್ಯದಲ್ಲಿ ಕ್ರೀಡೆಯ ಬೆಳವಣಿಗೆಗೆ ಮತ್ತು ಕ್ರೀಡಾಪಟುಗಳ ಉತ್ತೇಜನಕ್ಕಾಗಿ ನಮ್ಮ ಸರ್ಕಾರ ಕಟಿಬದ್ಧವಾಗಿದೆ. ಇತ್ತೀಚೆಗಷ್ಟೇ ಪೊಲೀಸ್ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ಅರಣ್ಯ ಇಲಾಖೆ ಸೇರಿದಂತೆ ಲಾಭದಲ್ಲಿರುವ ಸರ್ಕಾರಿ ಸ್ವಾಮ್ಯದ ನಿಗಮ, ಮಂಡಳಿ ಮತ್ತಿತರ ಇಲಾಖೆಗಳಲ್ಲಿಯೂ ಕ್ರೀಡಾಳುಗಳಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಪ್ರಸ್ತಾವವನ್ನು ಕೆಒಎ ಅಧ್ಯಕ್ಷರು ಸಲ್ಲಿಸಿದ್ದಾರೆ. ಅದರ ಕುರಿತು ಪರಿಶೀಲನೆ ನಡೆಸಿ ಮುಂದಿನ ಕ್ರಮದ ಬಗ್ಗೆ ಯೋಚಿಸುತ್ತೇವೆ‘ ಎಂದು ಭರವಸೆ ನೀಡಿದರು. ’ಕೇಂದ್ರ ಸರ್ಕಾರದ ಖೇಲೊ ಇಂಡಿಯಾದಂತಹ ಯೋಜನೆಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರವೂ ಬಹಳಷ್ಟು ಸವಲತ್ತು ನೀಡುತ್ತಿದೆ. ಇವುಗಳನ್ನು ಸದುಪಯೋಗ ಮಾಡಿಕೊಂಡು ಕ್ರೀಡಾಪಟುಗಳು ಪರಿಶ್ರಮ, ಶ್ರದ್ದೆ ಮತ್ತು ಆತ್ಮವಿಶ್ವಾಸದಿಂದ ಸಾಧನೆ ಮಾಡಬೇಕು‘ ಎಂದರು. ಹಾಲ್‌ ಆಫ್‌ ಫೇಮ್ ಉದ್ಘಾಟಿಸಿದ ರಾಜ್ಯಪಾಲ ವಜುಭಾಯ್ ವಾಲಾ, ’ಭಾರತೀಯರಲ್ಲಿ ಕ್ರೀಡೆ ಮತ್ತು ಸಂಗೀತಗಳು ಸ್ವಭಾವತಃ ಇವೆ. ಇವೆರಡೂ ನಮ್ಮ ಸಂಸ್ಕೃತಿಯ ಭಾಗಗಗಳೇ ಆಗಿವೆ. ಎಲ್ಲ ವರ್ಗದವರನ್ನೂ ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಏಕೈಕ ವೇದಿಕೆ ಕ್ರೀಡೆ. ಕ್ರೀಡಾಪಟುಗಳ ಮನಸ್ಸಲ್ಲಿ ಯಾವಾಗಲೂ ಗೆಲ್ಲುವ ಛಲ ಇರುತ್ತದೆ. ಅದೇ ನಿಜವಾದ ಪೌರುಷ‘ ಎಂದರು. ’ರಾಜ್ಯ ಸರ್ಕಾರಗಳು ಮತ್ತು ಕೈಗಾರಿಕೋದ್ಯಮಗಳು ಕ್ರೀಡೆಯ ಬೆಳವಣಿಗೆಗೆ ಹೆಚ್ಚು ಗಮನ ನೀಡಬೇಕು. ಈ ಕ್ಷೇತ್ರದಲ್ಲಿ ಸಂಪನ್ಮೂಲ ವಿನಿಯೋಗಿಸಿದರೆ ಖಂಡಿತವಾಗಿಯೂ ನಷ್ಟವಾಗುವುದಿಲ್ಲ. ಸಬಲ ವ್ಯಕ್ತಿತ್ವದ ಯುವಪಡೆ ನಿರ್ಮಾಣವಾಗುತ್ತದೆ. ಇತ್ತೀಚೆಗೆ ಮಹಿಳೆಯರೂ ಅತ್ಯುನ್ನತ ಸಾಧನೆಗಳನ್ನು ಮಾಡುತ್ತಿದ್ದಾರೆ. ಕ್ರೀಡೆಯಲ್ಲಿ ನಿರ್ಮಾಣವಾಗುವ ಉತ್ತಮ ವ್ಯಕ್ತಿತ್ವವೂ ಜೀವನಕ್ಕೂ ಅನ್ವಯಿಸುತ್ತದೆ‘ ಎಂದು ಹೇಳಿದರು. ’ಕ್ರೀಡಾ ಸಂಸ್ಥೆಗಳು ಮತ್ತು ಆಡಳಿತ ನಡೆಸುವವರು ಟೀಕೆಗಳನ್ನು ಎದುರಿಸಲು ಮುಕ್ತಮನಸ್ಸಿನಿಂದ ಸ್ವೀಕರಿಸಬೇಕು. ಟೀಕಾಕಾರರು ಬೈಗುಳಗಳನ್ನು ಕೊಟ್ಟು ಹೋಗುತ್ತಾರೆ. ಆದರೆ ನಮ್ಮಿಂದ ಏನೂ ತೆಗೆದುಕೊಂಡು ಹೋಗುವುದಿಲ್ಲವಲ್ಲ. ಆದ್ದರಿಂದ ಉತ್ತಮ ಕೆಲಸ ಮಾಡುತ್ತ ರಾಷ್ಟ್ರಕ್ಕಾಗಿ ದುಡಿಯುತ್ತ, ಆಡುತ್ತ ಮುಂದುವರಿಯಬೇಕು‘ ಎಂದು ವಜುಭಾಯ್ ಹೇಳಿದರು. ಸೊರಗಿದ ಕೊಡಗು ಹಾಕಿ ಕೆಲವು ವರ್ಷಗಳ ಹಿಂದೆ ಭಾರತ ಹಾಕಿ ತಂಡದಲ್ಲಿ ಕೊಡಗು ಮೂಲದ ಕನಿಷ್ಠ ಮೂರ್ನಾಲ್ಕು ಆಟಗಾರರು ಇರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಹುಡುಕಿ ಮತ್ತೆ ಕೊಡಗಿನಿಂದ ಹಾಕಿಪಟುಗಳು ಭಾರತ ತಂಡಕ್ಕೆ ಬರುವಂತೆ ಮಾಡಿ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಮತ್ತು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ಅಧ್ಯಕ್ಷ ನರೀಂದರ್ ಧ್ರುವ್ ಬಾತ್ರಾ ಹೇಳಿದರು. ಸಾಮಾಜಿಕ ಸಮಸ್ಯೆಗಳಿಗೆ ಕ್ರೀಡೆ ಮದ್ದು ಸಮಾಜದಲ್ಲಿ ಇವತ್ತು ಪೀಡಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಕ್ರೀಡೆಯಲ್ಲಿ ಪರಿಹಾರವಿದೆ. ಯುವಜನತೆಯ ಆರೋಗ್ಯ, ಹವ್ಯಾಸ, ವ್ಯಕ್ತಿತ್ವಗಳಲ್ಲಿ ಇವತ್ತು ಹತ್ತಾರು ಸಮಸ್ಯೆಗಳು ಕಾಡುತ್ತಿವೆ. ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಪರಿಹಾರ ಸಾಧ್ಯವಿದೆ. ದಕ್ಷಿಣ ಆಫ್ರಿಕಾದಲ್ಲಿ ಜನಾಂಗೀಯ ಸಮಾನತೆಗೆ ಶ್ರಮಿಸಿದ್ದ ನೆಲ್ಸನ್ ಮಂಡೇಲಾ ಅವರು ಕ್ರೀಡೆಯ ಮೂಲಕವೇ ಕ್ರಾಂತಿ ಮಾಡಿದ್ದರು. ಆದ್ದರಿಂದ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ನಮ್ಮ ಸರ್ಕಾರವು ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಅಶ್ವಥ್‌ ನಾರಾಯಣ ಹೇಳಿದರು. ಒಲಿಂಪಿಕ್ ಚಿನ್ನ ಜಯಿಸಲಿ ತಮ್ಮ ಕಾಲೇಜು ದಿನಗಳ ಕ್ರೀಡಾ ಚಟುವಟಿಕೆಗಳನ್ನು ನೆನಪಿಸಿಕೊಂಡ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ್ ಖರ್ಗೆ, ’ದೇಶದ ಯುವಕರಲ್ಲಿ ಪ್ರತಿಭೆ ಇದೆ. ಆದರೆ ಕ್ರಿಕೆಟ್ ಮಾತ್ರ ಕ್ರೀಡೆಯಲ್ಲ ಎಂಬುದು ಮನವರಿಕೆಯಾಗಬೇಕು. ಇನ್ನುಳಿದ ಕ್ರೀಡೆಗಳಲ್ಲಿ ಉತ್ತೇಜನ ನೀಡುವುದು ಅವಶ್ಯಕ. ರಾಜ್ಯದಿಂದ ಕನಿಷ್ಠ ಇಬ್ಬರು ಕ್ರೀಡಾಪಟುಗಳಾದರೂ ಒಲಿಂಪಿಕ್ ಚಿನ್ನ ಗೆದ್ದು ಬರುವಂತಾಗಬೇಕು ಎಂದರು. ಉದ್ಯೋಗಾವಕಾಶ ಕಲ್ಪಿಸಿ ಶೈಕ್ಷಣಿಕ ಪಠ್ಯಕ್ರಮದಲ್ಲಿ ಕ್ರೀಡೆಯನ್ನು ಪಠ್ಯವಾಗಿ ಸೇರ್ಪಡೆ ಮಾಡಬೇಕು. ಪೊಲೀಸ್ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗ ನೇರ ನೇಮಕಾತಿ ನೀಡಲು ನಿರ್ಣಯಿಸಿರುವುದು ಸ್ವಾಗತಾರ್ಹ. ಅದೇ ರೀತಿ ಅರಣ್ಯ ಇಲಾಖೆಯೂ ಸೇರಿದಂತೆ ವಿವಿಧ ನಿಗಮಗಳಲ್ಲಿಯೂ ಕ್ರೀಡಾಪಟುಗಳಿಗೆ ಅವಕಾಶ ನೀಡಬೇಕು ಎಂದು ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕ್ರೀಡಾ ಸಾಧಕರಾದ ಕೆನೆತ್ ಪೊವೆಲ್, ಅಶ್ವಿನಿ ನಾಚಪ್ಪ, ವಂದನಾ ರಾವ್, ಎಸ್ .ಡಿ ಈಶನ್, ಅನೂಪ್ ಶ್ರೀಧರ, ದಿಲೀಪ್ ಗುರುಮೂರ್ತಿ, ಜಿ. ಮನೋಹರನ್, ವೇಣು, ಅಮಲ್ ದಾಸ್, ಸಿ.ಸಿ.ಮಾಚಯ್ಯ, ಎಲ್ವಿರೊ ಬ್ರೆಟಿ, ಸುಬ್ಬಯ್ಯ, ಜೂಡ್ ಫೆಲಿಕ್ಸ್‌, ಆಶಿಶ್ ಬಲ್ಲಾಳ , ರಘುನಾಥ್, ಎಸ್‌.ವಿ. ಸುನೀಲ್, ಅನಿಲ್ ಆಲ್ಡ್ರಿನ್, ಹೆಲೆನ್ ಮೇರಿ, ಮ್ಯಾನುಯೆಲ್ ಫೆಡ್ರಿಕ್ಸ್, ಸಿ. ಕೆ. ಪೂಣಚ್ಚ, ಶೋಭಾ ನಾರಾಯಣ, ಪ್ರಕಾಶ್ ಪಿ.ಎನ್, ನಿಹಾರ್ ಅಮಿನ್, ಬಿ.ಸಿ.ರಮೇಶ್ ಅವರನ್ನು ಗೌರವಿಸಲಾಯಿತು. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ,ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ನಾರಾಯಣ ಸ್ವಾಮಿ, ಯು.ಬಿ. ವೆಂಕಟೇಶ್, ಶಾಲಿನಿ ರಜನೀಶ್, ರಾಜ್ಯ ಕ್ರೀಡಾ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ಹಾಜರಿದ್ದರು. ಹಾಲ್ ಆಫ್‌ ಫೇಮ್‌ನಲ್ಲಿ ಏನಿದೆ? ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ಹಿರಿಯ ಅಥ್ಲೀಟ್ ಕೆನೆತ್ ಪೋವೆಲ್ ಅವರಿಂದ ಸದ್ಯ ಭಾರತ ಹಾಕಿ ತಂಡದಲ್ಲಿ ಆಡುತ್ತಿರುವ ಎಸ್‌.ವಿ. ಸುನೀಲ್‌ವರೆಗೆ ಕರ್ನಾಟಕದ ಕ್ರೀಡಾ ದಿಗ್ಗಜರೆಲ್ಲರನ್ನೂ ಒಂದೇ ಸೂರಿನಡಿ ಕಣ್ತುಂಬಿಕೊಳ್ಳುವ ಅವಕಾಶ ಈಗ ಪ್ರತಿನಿತ್ಯ ಸಿಗಲಿದೆ. ಕಂಠೀರವ ಕ್ರೀಡಾಂಗಣದಲ್ಲಿರುವ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಒಲಿಂಪಿಕ್ ಭವನದ ’ಹಾಲ್ ಆಫ್‌ ಫೇಮ್‌‘ನಲ್ಲಿ ಕರ್ನಾಟಕದ ಕ್ರೀಡಾ ಸಾಧಕರ ಮಾಹಿತಿಗಳೊಂದಿಗೆ ಚಿತ್ರಗಳೂ ಕಂಗೊಳಿಸುತ್ತಿವೆ. ಶನಿವಾರ ಈ ಭವನವು ಲೋಕಾರ್ಪಣೆಯಾಯಿತು. ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ರಾಜ್ಯದ ಕ್ರೀಡಾಪಟುಗಳು, ಅರ್ಜುನ, ದ್ರೋಣಾಚಾರ್ಯ ಪುರಸ್ಕೃತರ ಚಿತ್ರಗಳೊಂದಿಗೆ, ಕೆಒಎ ನಡೆದು ಬಂದ ಹಾದಿಯ ಮಾಹಿತಿಯನ್ನೂ ಪ್ರದರ್ಶಿಸಲಾಗಿದೆ. ದೇಶ, ವಿದೇಶಗಳ ಕ್ರೀಡಾ ದಿಗ್ಗಜರು, ಕ್ರಿಕೆಟಿಗರ ಅಪರೂಪದ ಚಿತ್ರಗಳು ಇವೆ. ಅಲ್ಲದೇ ಇಲ್ಲಿಯವರೆಗೆ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಿದ ರಾಜ್ಯ ಮುಖ್ಯಮಂತ್ರಿಗಳ ಚಿತ್ರಗಳ ಒಂದು ವಿಭಾಗವೂ ಇಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.