ವಲ್ಚರ್ಸ್‌ ಕ್ರಿಕೆಟ್‌ ಕ್ಲಬ್‌ಗೆ ವೈ.ಎಸ್‌. ರಾಮಸ್ವಾಮಿ ಕಿರೀಟ ಬೆಂಗಳೂರು: ಶತಕ ವಂಚಿತ ಕೆ.ಎಲ್‌.ಶ್ರೀಜಿತ್‌ (96, 120 ಎಸೆತ, 6 ಬೌಂಡರಿ, 3 ಸಿಕ್ಸರ್‌), ಕರುಣ್ ನಾಯರ್‌ ಹಾಗೂ ಪವನ್ ದೇಶಪಾಂಡೆ ಅವರ ಅರ್ಧಶತಕಗಳ ಬಲದಿಂದ ವಲ್ಚರ್ಸ್‌ ಕ್ರಿಕೆಟ್‌ ಕ್ಲಬ್‌ ತಂಡವು ವೈ.ಎಸ್‌.ರಾಮಸ್ವಾಮಿ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಟ್ರೋಫಿಗೆ ಮುತ್ತಿಕ್ಕಿತು. ಫೈನಲ್ ಪಂದ್ಯದಲ್ಲಿ ಆ ತಂಡವು 107 ರನ್‌ಗಳಿಂದ ಮೌಂಟ್‌ ಜಾಯ್‌ ಕ್ರಿಕೆಟ್‌ ಕ್ಲಬ್ಅನ್ನು ಪರಾಭವಗೊಳಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ವಲ್ಚರ್ಸ್‌ ತಂಡವು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 334 ರನ್ ಪೇರಿಸಿತು. ಶ್ರೀಜಿತ್‌, ಕರುಣ್‌ (73, 65 ಎಸೆತ, 1 ಬೌಂ, 7 ಸಿಕ್ಸರ್‌) ಹಾಗೂ ಪವನ್‌ (52, 54 ಎ, 3 ಬೌಂ, 2 ಸಿ.) ಅವರು ಮೌಂಟ್ ಜಾಯ್ ಬೌಲರ್‌ಗಳ ದಾಳಿಯನ್ನು ಪುಡಿಗಟ್ಟಿದರು. ಅನಿರುದ್ಧ ಜೋಷಿ (46) ಕಾಣಿಕೆ ನೀಡಿದರು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಮೌಂಟ್‌ ಜಾಯ್ 48 ಓವರ್‌ಗಳಲ್ಲಿ 227 ರನ್‌ ಗಳಿಸಿ ಆಲೌಟ್ ಆಯಿತು. ಅಭಿಮನ್ಯು ಮಿಥುನ್‌ (22ಕ್ಕೆ 2), ಸಂತೋಕ್‌ ಸಿಂಗ್‌ (25ಕ್ಕೆ 2) ಹಾಗೂ ದರ್ಶನ್‌ ಎಂ.ಬಿ. (30ಕ್ಕೆ 3) ಜಾಯ್‌ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು. ಜಾಯ್‌ ತಂಡದ ರೋಹನ್‌ ನಾಯ್ಕರ್‌ (87, 81 ಎಸೆತ, 9 ಬೌಂ, 2ಸಿ.) ಹೋರಾಟ ಗಮನಸೆಳೆಯಿತು. ಸಂಕ್ಷಿಪ್ತ ಸ್ಕೋರ್‌: ವಲ್ಚರ್ಸ್‌ ಕ್ರಿಕೆಟ್‌ ಕ್ಲಬ್‌: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 334 (ಕರುಣ್ ನಾಯರ್ 73, ಕೆ.ಎಲ್‌.ಶ್ರೀಜಿತ್‌ 96, ಪವನ್‌ ದೇಶಪಾಂಡೆ 52, ಅನಿರುದ್ಧ ಜೋಷಿ 46, ಅಭಿಮನ್ಯು ಮಿಥುನ್‌ 25, ಅಜಯ್ ಕೃಷ್ಣನ್‌ 74ಕ್ಕೆ 3). ಮೌಂಟ್‌ ಜಾಯ್‌ ಕ್ರಿಕೆಟ್‌ ಕ್ಲಬ್‌: 48 ಓವರ್‌ಗಳಲ್ಲಿ 227 ಆಲೌಟ್‌ (ರೋಹನ್‌ ನಾಯ್ಕರ್‌ 87, ಶರಣ್‌ ಗೌಡ 42; ಅಭಿಮನ್ಯು ಮಿಥುನ್‌ 22ಕ್ಕೆ 2, ಸಂತೋಕ್ ಸಿಂಗ್‌ 25ಕ್ಕೆ 2, ದರ್ಶನ್‌ ಎಂ.ಬಿ. 30ಕ್ಕೆ 3, ಜಗದೀಶ್ ಸುಚಿತ್‌ 52ಕ್ಕೆ 2). ಫಲಿತಾಂಶ: ವಲ್ಚರ್ಸ್‌ ಕ್ರಿಕೆಟ್‌ ಕ್ಲಬ್‌ಗೆ 107 ರನ್‌ಗಳ ಗೆಲುವು ಹಾಗೂ ಪ್ರಶಸ್ತಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.