ಮುಂದಿನ ವರ್ಷ ಅಹಮದಾಬಾದ್‌ನಲ್ಲಿ ಇಂಗ್ಲೆಂಡ್–ಭಾರತ ಪಿಂಕ್ ಬಾಲ್ ಟೆಸ್ಟ್ ನವದೆಹಲಿ: ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಮೈದಾನವೆಂಬ ಹೆಗ್ಗಳಿಕೆಯಿರುವ ಅಹಮದಾಬಾದಿನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಫೆಬ್ರುವರಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಿಂಕ್ ಬಾಲ್ ಟೆಸ್ಟ್ ನಡೆಯಲಿದೆ. ಇಂಗ್ಲೆಂಡ್ ತಂಡವು 52 ದಿನಗಳ ಪ್ರವಾಸವನ್ನು ಭಾರತದಲ್ಲಿ ಮಾಡಲಿದೆ. ನಾಲ್ಕು ಟೆಸ್ಟ್, ಮೂರು ಏಕದಿನ ಮತ್ತು ಐದು ಟ್ವೆಂಟಿ–20 ಪಂದ್ಯಗಳು ನಡೆಯಲಿವೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಈ ಸರಣಿಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದರು. ಕೊರೊನಾ ವೈರಸ್‌ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ 2020ರಲ್ಲಿ ನಡೆಯಬೇಕಿದ್ದ ಟೂರ್ನಿಗಳನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಕ್ರಿಕೆಟ್‌ ಚಟುವಟಿಕೆಗಳು ಗರಿಗೆದರಿವೆ. ಕೋವಿಡ್ ತಡೆ ಮಾರ್ಗಸೂಚಿ ಅನ್ವಯವೇ ಸರಣಿಗಳ ಆಯೋಜನೆಯನ್ನು ಮಾಡಲಾಗುತ್ತಿದೆ. ಫೆಬ್ರುವರಿ 5ರಿಂದ ಮೊದಲ ಟೆಸ್ಟ್ ಚೆನ್ನೈನಲ್ಲಿ ಆರಂಭವಾಗುವುದು. 13ರಿಂದ ಎರಡನೇ ಟೆಸ್ಟ್ ಕೂಡ ಅಲ್ಲಿಯೇ ನಡೆಯುವುದು. ಮೂರನೇ ಟೆಸ್ಟ್‌ ಫೆ. 24ರಿಂದ ಅಹಮದಾಬಾದಿನಲ್ಲಿ ನಡೆಯುವುದು. ಇದು ಹಗಲು–ರಾತ್ರಿ ಟೆಸ್ಟ್ ಪಂದ್ಯವಾಗಿದೆ. ನಾಲ್ಕನೇ ಟೆಸ್ಟ್ ಕೂಡ ಇಲ್ಲಿಯೇ ಆಯೋಜನೆಗೊಳ್ಳುವುದು. ಮಾರ್ಚ್‌ 12 ರಿಂದ 20ರವರೆಗೆ ಇದೇ ಕ್ರೀಡಾಂಗಣದಲ್ಲಿ ಐದು ಟಿ20 ಪಂದ್ಯಗಳೂ ನಡೆಯುತ್ತವೆ. ಮಾರ್ಚ್ 23ರಿಂದ 28ರವರೆಗೆ ಮೂರು ಏಕದಿನ ಪಂದ್ಯಗಳನ್ನು ಪುಣೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಭಾರತ ತಂಡವು ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ’ಭಾರತ ತಂಡವು ಜನವರಿಯಲ್ಲಿ ತವರಿಗೆ ಮರಳುವುದು. ಆಟಗಾರರಿಗೆ ಒಂದು ವಾರದ ಬಿಡುವು ನೀಡಲಾಗುವುದು. ನಂತರ ಅವರು ಚೆನ್ನೈನಲ್ಲಿ ಟೆಸ್ಟ್‌ ಆಡಲು ತೆರಳುವ ಮುನ್ನ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಗಾಗುತ್ತಾರೆ. ನಂತರ ಚೆನ್ನೈನ ಜೀವ ಸುರಕ್ಷಾ ವಲಯಕ್ಕೆ ಪ್ರವೇಶಿಸುವರು‘ ಎಂದು ಜಯ್ ಶಾ ತಿಳಿಸಿದ್ದಾರೆ. ಈ ಸರಣಿಗೆ ಸಂಬಂಧಿಸಿದಂತೆ ಅಭ್ಯಾಸ ಪಂದ್ಯಗಳನ್ನು ಆಯೋಜಿಸಿರುವ ಕುರಿತು ಮಾಹಿತಿ ಇಲ್ಲ. ಭಾರತ–ಇಂಗ್ಲೆಂಡ್ ಸರಣಿ ವೇಳಾಪಟ್ಟಿ ದಿನಾಂಕ; ಪಂದ್ಯ; ಸ್ಥಳ ಫೆ. 5–9; ಮೊದಲ ಟೆಸ್ಟ್; ಚೆನ್ನೈ ಫೆ. 13–17; ಎರಡನೇ ಟೆಸ್ಟ್; ಚೆನ್ನೈ ಫೆ. 24–28; ಮೂರನೇ ಟೆಸ್ಟ್; ಅಹಮದಾಬಾದ್ ಮಾರ್ಚ್ 4–8; ನಾಲ್ಕನೇ ಟೆಸ್ಟ್‌; ಅಹಮದಾಬಾದ್ ––– ಮಾರ್ಚ್ 12; ಮೊದಲ ಟಿ20; ಅಹಮದಾಬಾದ್ ಮಾರ್ಚ್ 14; ಎರಡನೇ ಟಿ20; ಅಹಮದಾಬಾದ್ ಮಾರ್ಚ್ 16; ಮೂರನೇ ಟಿ20; ಅಹಮದಾಬಾದ್ ಮಾರ್ಚ್ 18; ನಾಲ್ಕನೇ ಟಿ20; ಅಹಮದಾಬಾದ್ ಮಾರ್ಚ್ 20; ಐದನೇ ಟಿ20; ಅಹಮದಾಬಾದ್ ––– ಮಾರ್ಚ್ 23; ಮೊದಲ ಏಕದಿನ; ಪುಣೆ ಮಾರ್ಚ್ 26; ಎರಡನೇ ಏಕದಿನ; ಪುಣೆ ಮಾರ್ಚ್ 28; ಮೂರನೇ ಏಕದಿನ; ಪುಣೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.