: ಯಾರ್ಕರ್‌ ‘ಮಾರ್ಕರ್’ ತಮಿಳುನಾಡಿನ ಟಿ. ನಟರಾಜನ್ ಐಪಿಎಲ್‌ನಲ್ಲಿ ಯಾರ್ಕರ್‌ಗಳನ್ನು ನಿರ್ಭಿಡೆಯಿಂದ ಹಾಕಿ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡುವ ಅವಕಾಶ ಪಡೆದುಕೊಂಡರು. ಹಾಗೆಂದು, ಆಸ್ಟ್ರೇಲಿಯಾ ನೆಲದಲ್ಲಿ ಅವರನ್ನು ಕಾಪಾಡಿದ್ದು ಅದೊಂದೇ ಅಲ್ಲ. ಹೆಚ್ಚು ಫಲ ಕೊಡುವ ಯಾರ್ಕರ್‌ಗಳನ್ನು ವಿಶ್ವದ ಶ್ರೇಷ್ಠ ಬೌಲರ್‌ಗಳು ಪ್ರಯೋಗಿಸಿದ್ದು ಕಡಿಮೆ. ಇನ್ನು ಮುಂದೆ ಅದರ ಬಳಕೆ ವ್ಯಾಪಕವಾಗುವ ಸಾಧ್ಯತೆಗಳು ದಟ್ಟವಾಗಿವೆ. ಬೂಮ್ರಾ, ನಟರಾಜನ್‌ಗೆ ಅದಕ್ಕಾಗಿ ಧನ್ಯವಾದ ಹೇಳಬೇಕು. ವಿವಿಎಸ್ ಲಕ್ಷ್ಮಣ್ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಎಸೆತವನ್ನು ಮೊದಲ ಬಾರಿಗೆ ಎದುರಿಸಿದ್ದಾಗ ದಂಗಾಗಿದ್ದರು. ಯಾಕೆಂದರೆ, ಲೆಗ್‌ ಸ್ಪಿನ್ನರ್ ಕುಂಬ್ಳೆ ಆಗಲೇ ಯಾರ್ಕರ್‌ ಹಾಕಿದ್ದರು. ಸ್ಪಿನ್ನರ್ ಒಬ್ಬ ಹೀಗೆ ಯಾರ್ಕರ್ ಹಾಕಿದರೆ ಸಾಂಪ್ರದಾಯಿಕ ಬ್ಯಾಟ್ಸ್‌ಮನ್‌ ಕಂಗಾಲಾಗುವುದು ಸಹಜವೇ. ಬಿ.ಎಸ್. ಚಂದ್ರಶೇಖರ್ ಕೂಡ ಇಂತಹ ಕರಾಮತ್ತುಗಳನ್ನು ಆಗೀಗ ತೋರುತ್ತಿದ್ದರು. ಯಾರ್ಕರ್ ಎಸೆತವೆನ್ನುವುದು ಲಾಗಾಯ್ತಿನಿಂದ ಅಪರೂಪಕ್ಕೆ ಕಾಣುತ್ತಿದ್ದ ಸೋಜಿಗ. ಅದನ್ನು ಇನ್ನೊಂದು ಹಂತಕ್ಕೆ ಮೇಲೆತ್ತಿದ್ದು ಪಾಕಿಸ್ತಾನದ ವೇಗಿಗಳು. ವಸೀಂ ಅಕ್ರಂ ಎಡಗೈ ವೇಗ ಹಾಗೂ ವಕಾರ್ ಯೂನಿಸ್ ಬಲಗೈ ವೇಗದ ಬೌಲಿಂಗ್ ಜತೆಯಾಟದ ಸವಿಯುಂಡವರಿಗೆ ಯಾರ್ಕರ್‌ ಹಬ್ಬ ಹೇಗಿರುತ್ತದೆ ಎನ್ನುವುದು ಗೊತ್ತಿರುತ್ತದೆ. ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಯಾರ್ಕರ್‌ಗಳನ್ನು ಹಾಕಿದವರ ಪಟ್ಟಿಯಲ್ಲಿ ವಕಾರ್‌ ಯೂನಿಸ್ ಈಗಲೂ ಮೇಲೆ ನಿಲ್ಲುತ್ತಾರೆ. ಇಂಗ್ಲೆಂಡ್‌ನ ಇಯಾನ್ ಬಾಥಮ್, ಆಸ್ಟ್ರೇಲಿಯಾದ ಅಲನ್ ಬಾರ್ಡರ್, ಭಾರತದ ಮೊಹಮ್ಮದ್ ಅಜರುದ್ದೀನ್, ನ್ಯೂಜಿಲೆಂಡ್‌ನ ಯಂಗ್ ಹೀಗೆ ಘಟಾನುಘಟಿಗಳನ್ನೆಲ್ಲ ವಕಾರ್ ತಮ್ಮ ಯಾರ್ಕರ್‌ಗಳಿಂದ ಚಕಿತಗೊಳಿಸಿದ್ದರು. ಅವು ಕೇವಲ ಯಾರ್ಕರ್‌ಗಳಲ್ಲ, ಇನ್‌ ಸ್ವಿಂಗಿಂಗ್ ಯಾರ್ಕರ್‌ಗಳು. ಅರ್ಥಾತ್ ಚೆಂಡು ತೇಲಿಬರುವ ದಿಕ್ಕಿನಿಂದ ಒಳಮುಖವಾಗಿ ಕ್ರೀಸ್‌ನೊಳಗೆ ನುಗ್ಗಿ, ಪುಟಿದು ವಿಕೆಟ್‌ ಛಿದ್ರ ಮಾಡುವಂಥವು. ಈ ಸಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಮುಗಿದ ಮೇಲೆ ಕಪಿಲ್ ದೇವ್ ತಮಗಿಷ್ಟವಾದ ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳನ್ನು ಹೆಸರಿಸಿದರು. ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಕಾಪಿಬುಕ್ ಹೊಡೆತಗಳು ಈಗಲೂ ಅವರಿಗೆ ಆಪ್ಯಾಯಮಾನ. ಆದರೆ, ಬೌಲರ್‌ಗಳಲ್ಲಿ ಅವರಿಗೆ ಹೆಚ್ಚು ಇಷ್ಟ ಜಸ್‌ಪ್ರೀತ್ ಬೂಮ್ರಾ. ಈ ಸಲ ಕಪಿಲ್ ಕಣ್ಣರಳಿಸುವಂತೆ ಮಾಡಿದವರು ಟಿ. ನಟರಾಜನ್. ಖುದ್ದು ಮಧ್ಯಮ ವೇಗದ ಬೌಲರ್ ಆಗಿ ಕಪಿಲ್‌ ದೇವ್ ಅವರಿಗೆ ಯಾರ್ಕರ್‌ಗಳನ್ನು ಹಾಕುವ ಕಷ್ಟ ಎಂಥದು ಎನ್ನುವುದು ಗೊತ್ತು. ನಟರಾಜನ್ ಐಪಿಎಲ್‌ನಲ್ಲಿ ಪುಂಖಾನುಪುಂಖವಾಗಿ ನಿರ್ಭಿಡೆಯಿಂದ ಯಾರ್ಕರ್‌ಗಳನ್ನು ಹಾಕಿದರು. ಅದೃಷ್ಟ ಅವರಿಗೆ ಒಲಿಯಿತು. ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಟ ಭಾರತ ತಂಡದ ನೆಟ್ಸ್‌ ಅಭ್ಯಾಸಕ್ಕೆ ಹೋಗಬೇಕಿದ್ದ ಅವರು ಏಕದಿನ ಹಾಗೂ ಟ್ವೆಂಟಿ20 ತಂಡಗಳ ಸದಸ್ಯರಲ್ಲಿ ಒಬ್ಬರಾದರು. ಹಾಗೆ ಒಲಿದುಬಂದ ಅವಕಾಶವನ್ನು ಅವರು ಹಣ್ಣಾಗಿಸಿಕೊಂಡ ರೀತಿಗೆ ಅಡಿಗೆರೆ ಎಳೆಯಬೇಕು. ಟ್ವೆಂಟಿ20 ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್‌ ಅವರನ್ನು ನಟರಾಜನ್ ಯಾರ್ಕರ್‌ ಹಾಕಿ ಬೌಲ್ಡ್‌ ಮಾಡಿದರು. ಸ್ವಯಂ ಯಾರ್ಕರ್ ಪ್ರತಿಭೆಯಾಗಿರುವ ಸ್ಟಾರ್ಕ್‌ ಅದನ್ನು ಅನುಭವಿಸಿ ಅವಾಕ್ಕಾದದ್ದು ನಿಜ. ಈ ಹೊತ್ತು ನಟರಾಜನ್‌ಗೆ ಅವಕಾಶದ ಏಣಿಯಾಗಿ ಯಾರ್ಕರ್‌ ಒದಗಿಬಂದದ್ದು ನಿಜವೇನೋ ಹೌದು. ಆದರೆ, ಅದೊಂದನ್ನೇ ಅಸ್ತ್ರವಾಗಿಸಿಕೊಂಡು ಕ್ರಿಕೆಟ್‌ನಲ್ಲಿ ದೀರ್ಘಕಾಲ ಉಸಿರಾಡಲು ಸಾಧ್ಯವಿಲ್ಲ. ಆ ಜ್ಞಾನೋದಯ ಅವರಿಗೆ ಬೇಗ ಆಗಿದ್ದರಿಂದಲೇ ಆಸ್ಟ್ರೇಲಿಯಾ ನೆಲದಲ್ಲಿ ಅವರು ಯಶಸ್ವಿಯಾಗಿದ್ದು. ವೇಗ, ಮೊನಚು ಎರಡನ್ನೇ ನೆಚ್ಚಿಕೊಂಡು ಬೌಲ್ ಮಾಡುವ ಬೂಮ್ರಾ ಕೂಡ ದಂಡನೆಗೆ ಒಳಗಾಗುತ್ತಿದ್ದಾಗ, ನಟರಾಜನ್ ವೇಗವನ್ನು ತಗ್ಗಿಸಿದರು. ಎದುರಾಳಿಗಳಿಗೆ ಮಾಂಝಾ ಕೊಡಲು ಅದು ಸಾಕಾಯಿತು. ಹಾರ್ದಿಕ್ ಪಾಂಡ್ಯ ತಮಗೆ ಸಂದ ಸರಣಿ ಸರ್ವೋತ್ತಮ ಪ್ರಶಸ್ತಿಯನ್ನು ಈ ಹೊಸ ಪ್ರತಿಭೆಯನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು, ಹಂಚಿಕೊಂಡಿದ್ದು ಅರ್ಥಪೂರ್ಣ ಕ್ಷಣ. ಭಾರತದ ಕ್ರಿಕೆಟ್‌ನಲ್ಲಿ ವೇಗದ ಬೌಲರ್‌ಗಳು ಯಾರ್ಕರ್‌ ಪ್ರವೀಣರಾಗಿ ಬೆಳೆದ ಉದಾಹರಣೆಗಳು ವಿರಳಾತಿ ವಿರಳ. ಕಪಿಲ್ ದೇವ್ ನಂತರದ ಕಾಲಘಟ್ಟದಲ್ಲಿ ಜಹೀರ್ ಖಾನ್ ಹಾಗೂ ಇರ್ಫಾನ್ ಪಠಾಣ್ ಆಗೀಗ ಅದನ್ನು ಪ್ರಯೋಗಿಸಿದರು. ಆ್ಯಡಂ ಗಿಲ್‌ಕ್ರಿಸ್ಟ್‌ ಅವರನ್ನು ಔಟ್‌ ಮಾಡಲು ಯಾರ್ಕರ್ ಲೇಸು ಎಂದು ಇರ್ಫಾನ್ ನಂಬಿದ್ದರು. ಅದು ಫಲ ಕೊಟ್ಟಿರುವ ಉದಾಹರಣೆಗಳೂ ಇವೆ. ಆದರೆ, ಆಶೀಶ್ ನೆಹ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಮುನಾಫ್ ಪಟೇಲ್, ಕರ್ನಾಟಕದ ವಿನಯ್‌ಕುಮಾರ್, ಜಯದೇವ್ ಉನದ್ಕತ್, ದಿಂಡಾ ಇವರೆಲ್ಲ ಯಾರ್ಕರ್‌ ಅನ್ನು ಅಸ್ತ್ರ ಎಂದು ಭಾವಿಸಿಕೊಂಡು ಬೆಳೆದವರಲ್ಲ. ವ್ಯಾಪಕವಾಗಿ ಬಳಸಬೇಕಾದ ಎಸೆತ ಅದು ಎಂದು ಬೌಲಿಂಗ್ ಕಲಿಕೆಯಲ್ಲಿ ಎಂದೂ ಭಾರತದ ಕ್ರಿಕೆಟ್‌ ಅಕಾಡೆಮಿಗಳಲ್ಲಿ ಹೇಳಿಕೊಡುವುದಿಲ್ಲ. ಯಾಕೆಂದರೆ, ಯಾರ್ಕರ್‌ ಹೆಚ್ಚಾಗಿ ಬೌಲ್ ಮಾಡುವುದು ಸುಲಭವಲ್ಲ. ತುಸು ಏರುಪೇರಾದರೂ ಬ್ಯಾಟ್ಸ್‌ಮನ್‌ ಪಾಲಿಗೆ ಅದು ವರದಾನವಾಗುವ ಸಾಧ್ಯತೆ ಇದೆ. ಅದರಲ್ಲೂ ಎ.ಬಿ. ಡಿವಿಲಿಯರ್ಸ್, ಸ್ಟೀವ್ ಸ್ಮಿತ್ ತರಹದ ಯದ್ವಾತದ್ವಾ ಫುಟ್‌ವರ್ಕ್ ಮಾಡುವ ಬ್ಯಾಟ್ಸ್‌ಮನ್‌ಗಳಿಗೆ ಬೌಲರ್‌ಗಳ ಸಣ್ಣ ತಪ್ಪೇ ದೊಡ್ಡ ಸಾಧ್ಯತೆಯಾಗಿ ಪರಿವರ್ತಿತವಾಗುತ್ತದೆ. ಹಾಗಿದ್ದರೆ, ಯಾರ್ಕರ್ ಎನ್ನುವುದು ಜನ್ಮಜಾತ ಪ್ರತಿಭೆಗಳ ಸ್ವತ್ತೇ? ಹೌದು ಎಂದು ಸರಳವಾಗಿ ಹೇಳುವುದು ಕಷ್ಟ. ಯಾಕೆಂದರೆ, ಶ್ರೀಲಂಕಾದ ಯಾರ್ಕರ್ ಪರಿಣತ ಲಸಿತ್ ಮಲಿಂಗ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡಲು ಆರಂಭಿಸಿದ ಮೇಲೆ ಚಂಪಕ ರಾಮನಾಯಕೆ, ರುಮೇಶ್ ರತ್ನಾಯಕೆ ಕಿವಿಯೊಳಗೆ ತಂತ್ರಮಂತ್ರ ಅರುಹುವವರೆಗೆ ಅದೊಂದು ಅಸ್ತ್ರ ಎನ್ನುವುದೇ ಅವರಿಗೆ ಗೊತ್ತಿರಲಿಲ್ಲ. ಮಲಿಂಗ ಜತೆ ಐಪಿಎಲ್‌ನಲ್ಲಿ ಡ್ರೆಸಿಂಗ್ ರೂಂ ಹಂಚಿಕೊಂಡಿದ್ದ ಜಸ್‌ಪ್ರೀತ್‌ ಬೂಮ್ರಾಗೆ ಶ್ರೀಲಂಕಾದ ವೇಗಿಯೇನು ಯಾರ್ಕರ್ ಪಾಠ ಹೇಳಿಕೊಡಲಿಲ್ಲ. ಸ್ವಯಂ ಕಲಿಕೆಯಿಂದಲೇ ಅದನ್ನು ರೂಢಿಸಿಕೊಂಡಿದ್ದಾಗಿ ಬೂಮ್ರಾ ಹೇಳಿಕೊಂಡರು. ಬಾಲ್ಯದಲ್ಲಿ ಬೂಮ್ರಾ ಗಂಟೆಗಟ್ಟಲೆ ಕ್ರಿಕೆಟ್‌ ವಿಡಿಯೊಗಳನ್ನು ನೋಡುತ್ತಾ, ಪಾಕಿಸ್ತಾನದ ವೇಗಿಗಳು ಹೇಗೆ ಯಾರ್ಕರ್‌ ಹಾಕುವುದನ್ನು ಅಭ್ಯಾಸ ಮಾಡಿಕೊಂಡರಬಹುದು ಎಂದು ಊಹಿಸಲಾರಂಭಿಸಿದರು. ಮನೆಯ ದೊಡ್ಡ ಹಾಲ್‌ನಲ್ಲಿ ಟೆನಿಸ್‌ ಹಾಗೂ ರಬ್ಬರ್‌ ಬಾಲ್‌ಗಳಲ್ಲಿ ಗೋಡೆಯ ಬುಡಕ್ಕೆ ಗುರಿ ಮಾಡಿ ಎಸೆತಗಳನ್ನು ಹಾಕತೊಡಗಿದರು. ಅದರಲ್ಲಿ ಪಳಗುತ್ತಾ ಬಂದು ಅವರ ಬೌಲಿಂಗ್ ಈ ಪರಿಯಾಗಿ ರೂಪುತಳೆದಿದೆ. ಸಚಿನ್ ತೆಂಡೂಲ್ಕರ್ ನೆಟ್ಸ್‌ ಅಭ್ಯಾಸಕ್ಕೆಂದು ಕರೆಸಿಕೊಂಡಿದ್ದ ಟೆನಿಸ್‌ ಬಾಲ್ ಪರಿಣತ ವೇಗಿಗಳಲ್ಲಿ ಬೂಮ್ರಾ ಕೂಡ ಒಂದು ಕಾಲದಲ್ಲಿ ಒಬ್ಬರಾಗಿದ್ದರು. ಇದರರ್ಥ, ಟೆನಿಸ್‌ ಬಾಲ್‌ನಲ್ಲಿ ಹೆಚ್ಚು ಅವಧಿ ಕ್ರಿಕೆಟ್‌ ಆಡಿ ಪಳಗಿದವರಿಗೆ ಈಗ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಳ್ಳೆಯ ಕಾಲ ಬಂದಿದೆ. ಹಾರ್ದಿಕ್ ಪಾಂಡ್ಯ ಕೂಡ ಐನೂರು ಆರುನೂರು ರೂಪಾಯಿ ಸಂಭಾವನೆಯ ಆಸೆಯಿಂದ ಗಲ್ಲಿ ಕ್ರಿಕೆಟ್‌ನಲ್ಲಿ ಟೆನಿಸ್‌ ಬಾಲ್‌ನಲ್ಲಿ ಆಡಿದವರೇ. ಯಾರ್ಕರ್ ಪರಿಣತ ಬೌಲರ್‌ಗಳು ಸಾರ್ವಕಾಲಿಕ ಶ್ರೇಷ್ಠರ ಪಟ್ಟಿಯಲ್ಲಿ ಹೆಚ್ಚೇನೂ ಕಾಣುವುದಿಲ್ಲ. ರಿಚರ್ಡ್‌ ಹ್ಯಾಡ್ಲಿ, ಮಾಲ್ಕಂ ಮಾರ್ಷಲ್, ಕರ್ಟ್ನಿ ವಾಲ್ಶ್, ಶಾನ್ ಪೊಲಾಕ್, ಬ್ರೂಸ್‌ ರೀಡ್, ಇಮ್ರಾನ್ ಖಾನ್, ಕಪಿಲ್‌ ದೇವ್, ಗ್ಲೆನ್ ಮೆಕ್‌ಗ್ರಾ, ಜಾವಗಲ್ ಶ್ರೀನಾಥ್ ಇವರ‍್ಯಾರೂ ಯಾರ್ಕರ್‌ ಪರಿಣತರಲ್ಲ. ಅಷ್ಟೇ ಏಕೆ, ಈ ಕಾಲದ ಗಮನಾರ್ಹ ವೇಗಿಗಳಾದ ಕಗಿಸೊ ರಬಾಡ, ಜೋಫ್ರಾ ಆರ್ಚರ್‌, ಟ್ರೆಂಟ್ ಬೌಲ್ಟ್ ಕೂಡ ಅದನ್ನೇನೂ ದೊಡ್ಡ ಅಸ್ತ್ರದಂತೆ ಪ್ರಯೋಗಿಸುವುದಿಲ್ಲ. ಇಂಗ್ಲೆಂಡ್‌ನ ಜೇಮ್ಸ್‌ ಆಂಡರ್‌ಸನ್‌ಗಿಂತ ಹೆಚ್ಚಾಗಿ ಆ್ಯಂಡ್ರೂ ಫ್ಲಿಂಟಾಫ್ ಅದನ್ನು ಪರಿಣಾಮಕಾರಿಯಾಗಿ ಬಳಸಿದರು. ಪ್ಯಾಟ್‌ ಕಮಿನ್ಸ್‌, ಹ್ಯಾಜಲ್‌ವುಡ್‌ ಬೌಲಿಂಗ್ ವೈವಿಧ್ಯದ ನಡುವೆಯೇ ಸ್ಟಾರ್ಕ್ ಅದನ್ನು ಆಗೀಗ ಪ್ರಯೋಗಿಸಿದರು. ಇಂಗ್ಲೆಂಡ್‌ನಲ್ಲಿ ಕ್ರಿಸ್ ಜೋರ್ಡಾನ್ ಅದನ್ನು ಪರಿಣಾಮಕಾರಿಯಾಗಿ ಬಳಸುತ್ತಾರೆ. ಶಾರ್ಟ್‌ ರನ್‌ಅಪ್‌ ಹಾಗೂ ವಿಲಕ್ಷಣ ಬೌಲಿಂಗ್‌ ಶೈಲಿಯಿಂದ ಬ್ಯಾಟ್ಸ್‌ಮನ್‌ ಅಂದಾಜುಗಳನ್ನೆಲ್ಲ ಬುಡಮೇಲು ಮಾಡುವ ಬೂಮ್ರಾ ಎಸೆತಗಳನ್ನು ಆಡಲು ತಾನು ಇಷ್ಟಪಡಲಾರೆ ಎಂದು ಬ್ರಯಾನ್ ಲಾರಾ ಇತ್ತೀಚೆಗೆ ಹೇಳಿದ್ದಕ್ಕೆ ಕಾರಣವಿದೆ. ಅಂತೆಯೇ ಆಸ್ಟ್ರೇಲಿಯಾ ಬ್ಯಾಟರ್‌ಗಳು ನಟರಾಜನ್ ವರಸೆಗಳನ್ನು ನೋಡಿ ದಂಗಾಗಿದ್ದರಲ್ಲೂ ಹೊಸತನದ ಬೌಲಿಂಗ್ ಸೃಜನಶೀಲತೆಯ ಕಾಣ್ಕೆ ಇದೆ. ಕೊನೆಯದಾಗಿ ಒಂದು ಪ್ರಶ್ನೆ: 2019–20ರ ರಣಜಿ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು? ಆ ಪಟ್ಟಿಯಲ್ಲಿ ಎಷ್ಟು ಕಣ್ಣಗಲಿಸಿ ನೋಡಿದರೂ ನಟರಾಜನ್ ಹೆಸರು ಕಾಣಿಸುವುದಿಲ್ಲ. ಸೌರಾಷ್ಟ್ರದ ಜಯದೇವ ಉನದ್ಕತ್ 67 ವಿಕೆಟ್‌ಗಳನ್ನು ಪಡೆದು ಮೊದಲಿಗರಾಗಿದ್ದರು. 45 ವಿಕೆಟ್‌ಗಳನ್ನು ಪಡೆದ ಕರ್ನಾಟಕದ ವೇಗಿ ವಿನಯ್‌ಕುಮಾರ್ ಎಂಟನೆಯವರಾಗಿದ್ದರು. ನಟರಾಜನ್ ಇದುವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳೆಲ್ಲವನ್ನೂ ಸೇರಿಸಿದರೆ 18 ವಿಕೆಟ್‌ಗಳನ್ನಷ್ಟೇ ಪಡೆದಿರುವುದು. ಐಪಿಎಲ್ ಹೇಗೆಲ್ಲ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ ಎನ್ನುವುದಕ್ಕೆ ಇದು ಇನ್ನೊಂದು ನಿದರ್ಶನ. ಅಪರೂಪಕ್ಕೆ ಬಳಸಬೇಕಾದ ’ಬ್ರಹ್ಮಾಸ್ತ್ರ’ದಂಥ ಯಾರ್ಕರ್ ನಟರಾಜನ್ ಪಾಲಿಗೆ ಅದೃಷ್ಟವಾಗಿ ಒದಗಿಬಂದಿದ್ದು ಗಮನಾರ್ಹ. ಹಾಗೆಂದು, ಬರೀ ಅದೊಂದೇ ಅವರನ್ನು ಹೆಚ್ಚು ಕಾಲ ಪೊರೆಯಲಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.