ಗಾಯ: ಮೊದಲ ಟೆಸ್ಟ್‌ಗೆ ವಾರ್ನರ್ ಇಲ್ಲ ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್‌ ವಾರ್ನರ್‌ ಅವರು ಭಾರತ ತಂಡದ ಎದುರಿನ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್‌ ಮಾಡುವ ವೇಳೆ ವಾರ್ನರ್‌ ಗಾಯಗೊಂಡಿದ್ದರು. ತೊಡೆಯ ಸ್ನಾಯುಸೆಳೆತಕ್ಕೆ ಒಳಗಾಗಿದ್ದ ಅವರು ಮೂರನೇ ಏಕದಿನ ಹಾಗೂ ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರಗುಳಿದಿದ್ದರು. ‘ಕಡಿಮೆ ಅವಧಿಯಲ್ಲೇ ನನ್ನಲ್ಲಿ ಸಾಕಷ್ಟು ಚೇತರಿಕೆ ಕಂಡುಬಂದಿದೆ, ಸ್ನಿಡಿಯಲ್ಲಿಯೇ ಉಳಿಯುವ ಮೂಲಕ ಪೂರ್ಣ ಪ್ರಮಾಣದ ಫಿಟ್‌ನೆಸ್‌ ಕಾಯ್ದುಕೊಳ್ಳುವ ಪ್ರಯತ್ನ ಮುಂದುವರಿಸುತ್ತೇನೆ‘ ಎಂದು ವಾರ್ನರ್‌ ತಿಳಿಸಿದ್ದಾರೆ. ಅಡಿಲೇಡ್‌ನಲ್ಲಿ ಡಿಸೆಂಬರ್‌ 17ರಿಂದ ಮೊದಲ ಟೆಸ್ಟ್‌ ಆರಂಭವಾಗಲಿದೆ. ‘ಗಾಯ ಬಹುತೇಕ ಗುಣವಾಗಿದೆ, ಆದರೆ ಟೆಸ್ಟ್‌ ಪಂದ್ಯದ ಪರಿಸ್ಥಿತಿಗೆ ಶೇಕಡ 100ರಷ್ಟು ಸಿದ್ಧವಾಗಿರುವುದನ್ನು ಸ್ವತಃ ನನ್ನ ಮನಸ್ಸಿಗೆ ಮತ್ತು ನನ್ನ ತಂಡಕ್ಕೆ ಸಾಬೀತು ಪಡಿಸಬೇಕಿದೆ‘ ಎಂದಿದ್ದಾರೆ. ವಾರ್ನರ್‌ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ. ಇತ್ತೀಚೆಗಷ್ಟೇ ಭಾರತ ಎ ತಂಡದ ಎದುರು ಶತಕ ಸಿಡಿಸಿದ್ದ ಆಸ್ಟ್ರೇಲಿಯಾ ‘ಎ‘ ತಂಡದ ಕ್ಯಾಮೆರಾನ್‌ ಗ್ರೀನ್‌ಗೆ ಅವಕಾಶ ಸಿಗುವ ಸಾಧ್ಯತೆ ಇರುವುದಾಗಿ ವರದಿಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.