ವಯಸ್ಸು 40; ಹಫೀಜ್‌ಗೆ ‘20’ರ ಹುರುಪು ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಸೋತು ಸರಣಿಯನ್ನು ಆತಿಥೇಯರಿಗೆ ಬಿಟ್ಟುಕೊಟ್ಟಿತು. ಈ ಪಂದ್ಯದಲ್ಲಿ ಪಾಕಿಸ್ತಾನದ ಮೊಹಮ್ಮದ್ ಹಫೀಜ್ ತೋರಿದ ಹೋರಾಟ ಕ್ರಿಕೆಟ್ ಜಗತ್ತಿನ ಗಮನ ಸೆಳೆಯಿತು. ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದಾಗ ಅವರು ಗಳಿಸಿದ ಮೊತ್ತ 99 ರನ್‌ ಆಯಿತು. ಪಂದ್ಯವೊಂದರಲ್ಲಿ ಗರಿಷ್ಠ ರನ್ ಗಳಿಸಿದ, 40 ವರ್ಷ ದಾಟಿದ ಮೊದಲ ಆಟಗಾರ ಎಂಬ ಖ್ಯಾತಿಯೂ ಅವರದಾಯಿತು. ಮಾಲ್ಟಾದ ಹೆನ್ರಿಕ್ ಗೆರಿಕ್ ಅವರು ಬಲ್ಗೇರಿಯಾ ವಿರುದ್ಧ ಗಳಿಸಿದ 91 ರನ್‌ಗಳು ಈ ವರೆಗಿನ ದಾಖಲೆಯಾಗಿತ್ತು. ವಯಸ್ಸು 35 ಆಯಿತೆಂದರೆ ಕ್ರೀಡಾಲೋಕದಲ್ಲಿ ನಿವೃತ್ತಿಯ ಬಗ್ಗೆ ಯೋಚನೆ ಮಾಡುವವರೇ ಹೆಚ್ಚು. ದೇಹ–ಮನಸ್ಸು ಆಟಕ್ಕೆ ಹೊಂದಿಕೊಳ್ಳುವುದಿಲ್ಲ ಎಂಬುದು ಅದಕ್ಕೆ ಅವರು ನೀಡುವ ಕಾರಣ. ಆದರೆ ಅಪರೂಪಕ್ಕೆ ಕೆಲವರು 40 ವರ್ಷ ದಾಟಿಯೂ ಅಂಗಣದಲ್ಲಿ ಸಕ್ರಿಯರಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಕ್ರಿಸ್‌ ಗೇಲ್‌, ಎಬಿ ಡಿವಿಲಿಯರ್ಸ್, ಎಂ.ಎಸ್‌.ಧೋನಿ, ಕೆವಿನ್ ಪೀಟರ್ಸನ್, ಇಯಾನ್ ಬೆಲ್‌, ಮ್ಯಾಥ್ಯೂ ಹೇಡನ್, ಜಸ್ಟಿನ್ ಲ್ಯಾಂಗರ್ ಮುಂತಾದವರು 35 ವರ್ಷದ ನಂತರವೂ ಅಮೋಘ ಬ್ಯಾಟಿಂಗ್ ಮಾಡಿದ್ದರು. ಸದ್ಯ 40 ವರ್ಷಗಳ ನಂತರವೂ ಟಿ20 ಆಡುತ್ತಿರುವವರಲ್ಲಿ ಕ್ರಿಸ್ ಗೇಲ್ ಮತ್ತು ಮೊಹಮ್ಮದ್ ಹಫೀಸ್ ಪ್ರಮುಖರು. 18 ವರ್ಷಗಳಿಂದ ಪಾಕಿಸ್ತಾನ ತಂಡದಲ್ಲಿರುವ ಹಫೀಜ್‌ ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಆಗಿದ್ದರು. ಟಿ20ಯಲ್ಲೂ ಅವರು ಅಗ್ರ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಈ ವರ್ಷ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದು ರನ್ ಗಳಿಕೆ ಸರಾಸರಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆದರೆ ಅವರ ಸ್ಟ್ರೈಕ್ ರೇಟ್ (138.84) ವಿಶ್ವ ಕ್ರಿಕೆಟ್‌ನ ಪ್ರಮುಖ ಬ್ಯಾಟ್ಸ್‌ಮನ್‌ಗಳೆಲ್ಲರನ್ನೂ ಮೀರಿ ನಿಂತಿದೆ ಎಂಬ ಅಂಶ ಕ್ರಿಕೆಟ್ ಅಂಕಿಅಂಶಕಗಳಲ್ಲಿ ದಾಖಲಾಗಿದೆ. 2008ನೇ ವರ್ಷವನ್ನು ಹೊರತುಪಡಿಸಿದರೆ 2005ರಿಂದ ಈ ವರೆಗೆ ಹಫೀಜ್ ಪ್ರತಿ ವರ್ಷವೂ 100ಕ್ಕಿಂತ ಅಧಿಕ ಸ್ಟ್ರೈಕ್ ರೇಟ್ ಹೊಂದಿದ್ದಾರೆ. 1980ರಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ಜನಿಸಿದ ಹಫೀಜ್ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ಗೆ 2003ರಲ್ಲಿ ಪದಾರ್ಪಣೆ ಮಾಡಿದ್ದರು. ಬಲಗೈ ಬ್ಯಾಟ್ಸ್‌ಮನ್‌ ಆಗಿರುವ ಅವರು ಆಫ್ ಬ್ರೇಕ್ ಬೌಲಿಂಗ್ ಕೂಡ ಮಾಡಬಲ್ಲ ಆಲ್‌ರೌಂಡರ್. 2006ರಿಂದ ಟಿ20 ಕ್ರಿಕೆಟ್ ಆಡುತ್ತಿರುವ ಹಫೀಜ್ ಈ ವರೆಗೆ 306 ಪಂದ್ಯಗಳನ್ನು ಆಡಿದ್ದು 6717 ರನ್ ಕಲೆ ಹಾಕಿದ್ದಾರೆ. ಎರಡು ಶತಕ ಮತ್ತು 39 ಅರ್ಧಶತಕಗಳು ಅವರ ಖಾತೆಯಲ್ಲಿ ಇವೆ. 177 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.