ಕೊಹ್ಲಿಯನ್ನು ಔಟ್ ಮಾಡಿ ಪೆವಿಲಿಯನ್‌ಗೆ ಕಳಿಸುವುದು ತುಂಬಾ ವಿಶೇಷ: ಆ್ಯಂಡರ್ಸನ್‌ ಲೀಡ್ಸ್‌: ‘ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಔಟ್‌ ಮಾಡಿ ಪೆವಿಲಿಯನ್‌ಗೆ ಕಳಿಸುವುದೆಂದರೆ ತುಂಬಾ ವಿಶೇಷ’ ಎಂದು ಇಂಗ್ಲೆಂಡ್‌ ತಂಡದ ವೇಗಿ ಜೇಮ್ಸ್ ಆ್ಯಂಡರ್ಸನ್ ಹೇಳಿದ್ದಾರೆ. ಗುರುವಾರ ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡ 78 ರನ್‌ಗಳಿಗೆ ಆಲೌಟ್‌ ಆಗಿತ್ತು. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಕೇವಲ 7 ರನ್‌ ಗಳಿಸಿ ಆ್ಯಂಡರ್ಸನ್‌ಗೆ ವಿಕೆಟ್‌ ಒಪ್ಪಿಸಿದ್ದರು. ಈ ಮೂಲಕ ಜೇಮ್ಸ್‌ ಆ್ಯಂಡರ್ಸನ್‌ ಅವರು ಒಂದೇ ಸರಣಿಯಲ್ಲಿ ಏಳು ಬಾರಿ ಕೊಹ್ಲಿ ಅವರನ್ನು ಔಟ್‌ ಮಾಡಿದ್ದು ವಿಶೇಷ. ಪಂದ್ಯ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಆ್ಯಂಡರ್ಸನ್‌, ‘ಕೊಹ್ಲಿ ಅವರನ್ನು ಔಟ್‌ ಮಾಡಿದ ಕ್ಷಣವನ್ನು ತುಂಬಾ ವಿಶೇಷ ಎಂದು ಭಾವಿಸುತ್ತೇನೆ. ಅವರ ಎದುರಾಳಿಯಾಗಿ ಹಲವು ಪಂದ್ಯಗಳನ್ನು ಆಡಿದ್ದೇನೆ. ಕೊಹ್ಲಿಯನ್ನು ಬೇಗ ಔಟ್‌ ಮಾಡದೆ ಹೋದರೆ ನಮ್ಮನ್ನು ದುಃಸ್ವಪ್ನವಾಗಿ ಕಾಡುವುದರಲ್ಲಿ ಎರಡು ಮಾತಿಲ್ಲ’ ಎಂದಿದ್ದಾರೆ. ಪ್ರಥಮ ಇನ್ನಿಂಗ್ಸ್‌ನಲ್ಲಿ ಆ್ಯಂಡರ್ಸನ್ ಎಸೆದ 8 ಓವರ್‌ಗಳಲ್ಲಿ ಕೇವಲ 6 ರನ್‌ ಕೊಟ್ಟು ಪ್ರಮುಖ 3 ವಿಕೆಟ್‌ಗಳನ್ನು ಪಡೆದು ಭಾರತ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಎರಡನೇ ಪಂದ್ಯವನ್ನು ಭಾರತ 151 ರನ್‌ ಅಂತರದಿಂದ ಗೆದ್ದುಕೊಂಡಿತ್ತು. ಇದೀಗ ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 78 ರನ್‌ ಗಳಿಸಿ ಆಲೌಟ್‌ ಆಗಿತ್ತು. ಸದ್ಯ ಎರಡನೇ ದಿನದಾಟ ಮುಂದುವರಿಸಿರುವ ಇಂಗ್ಲೆಂಡ್‌ 68 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ. ಇದನ್ನೂ ಓದಿ... ಕೊಹ್ಲಿಯ ಸತತ ವೈಫಲ್ಯ: ಸಚಿನ್‌ರಿಂದ ನೆರವು ಪಡೆಯಲು ಗವಾಸ್ಕರ್‌ ಸಲಹೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.