ಇಂಗ್ಲೆಂಡ್‌ ತಂಡಕ್ಕೆ ಕಾಲಿಸ್‌ ಬ್ಯಾಟಿಂಗ್‌ ಸಲಹೆಗಾರ ಲಂಡನ್‌: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್‌ ಜಾಕ್ ಕಾಲಿಸ್ ಅವರು ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ಸೋಮವಾರ ನೇಮಕಗೊಂಡಿದ್ದಾರೆ. ಶ್ರೀಲಂಕಾ ವಿರುದ್ಧ ಜನೆವರಿ 14ರಂದು ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಪರ ಕಾಲಿಸ್ ಕಾರ್ಯನಿರ್ವಹಿಸಲಿದ್ದಾರೆ. ‘ಎರಡು ಟೆಸ್ಟ್ ಪಂದ್ಯಗಳನ್ನು ಆಡಲು ಜನೆವರಿ 2ರಂದು ತಂಡವು ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಲಿದೆ. ಏಳು ಮಂದಿ ತರಬೇತುದಾರರು ತಂಡದಲ್ಲಿ ಇರಲಿದ್ದಾರೆ‘ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ. ‘ಜಾಕ್ ಕಾಲಿಸ್ ಅವರು ಮೊದಲ ಬಾರಿ ಇಂಗ್ಲೆಂಡ್‌ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ‘ ಎಂದು ಇಸಿಬಿ ಹೇಳಿದೆ. ಹೋದ ವರ್ಷ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ 45 ವರ್ಷದ ಕಾಲಿಸ್, ದಕ್ಷಿಣ ಆಫ್ರಿಕಾ ಪರ ಬ್ಯಾಟಿಂಗ್‌ ಸಲಹೆಗಾರರಾಗಿ ಕೆಲಸ ಮಾಡಿದ್ದರು. ದಕ್ಷಿಣ ಆಫ್ರಿಕಾ ಪರ 166 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಕಾಲಿಸ್‌, 55.37ರ ಸರಾಸರಿಯಲ್ಲಿ 13,298 ರನ್‌ ಕಲೆ ಹಾಕಿದ್ದರು. 292 ವಿಕೆಟ್‌ ಕೂಡ ಗಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.