ಶಮಿಗೆ ಆರು ವಾರಗಳ ವಿಶ್ರಾಂತಿ; ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ಗೂ ಅನುಮಾನ ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ಓವಲ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯದ ಸಮಸ್ಯೆಗೊಳಗಾಗಿರುವ ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಆರು ವಾರಗಳ ವಿಶ್ರಾಂತಿ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧ ಫೆಬ್ರವರಿನಲ್ಲಿ ತವರಿನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಲಭ್ಯರಾಗುವ ಸಾಧ್ಯತೆ ಕ್ಷೀಣವೆನಿಸಿದೆ. ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಪ್ಯಾಟ್ ಕಮಿನ್ಸ್ ದಾಳಿ ಎದುರಿಸುವಲ್ಲಿ ವಿಫಲರಾಗಿದ್ದ ಮೊಹಮ್ಮದ್ ಶಮಿ ಮುಂಗೈಗೆ ಗಾಯ ಮಾಡಿಕೊಂಡಿದ್ದರು. ಬಳಿಕ ಸ್ಕ್ಯಾನ್ ವೇಳೆಯಲ್ಲಿ ಫ್ರಾಕ್ಚರ್ ಆಗಿರುವುದು ಕಂಡುಬಂದಿತ್ತು. ಆಸ್ಟ್ರೇಲಿಯಾ ವಿರುದ್ಧದ ಉಳಿದಿರುವ ಮೂರು ಪಂದ್ಯಗಳಿಗೆ ಅಲಭ್ಯವಾಗಿರುವ ಮೊಹಮ್ಮದ್ ಶಮಿ ಮಂಗಳವಾರದಂದು ತಾಯ್ನಾಡಿಗೆ ಮರಳಿದ್ದರು. ಇದನ್ನೂ ಓದಿ: : ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಿಂದಲೂ ಡೇವಿಡ್ ವಾರ್ನರ್ ಔಟ್ ಮೊಹಮ್ಮದ್ ಶಮಿ ವಿಶ್ರಾಂತಿ ಹಾಗೂ ಪುನಶ್ಚೇತನವು ಆರು ವಾರ ತೆಗೆದುಕೊಳ್ಳಲಿರುವುದರಿಂದ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆಡುವುದು ಅನುಮಾನವೆನಿಸಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಗಲೇ ಗಾಯಾಳು ಇಶಾಂತ್ ಶರ್ಮಾ ಸೇವೆಯಿಂದ ವಂಚಿತವಾಗಿರುವ ಟೀಮ್ ಇಂಡಿಯಾ ಈಗ ಮೊಹಮ್ಮದ್ ಶಮಿ ಅವರನ್ನು ಕಳೆದುಕೊಂಡಿರುವುದು ಬೌಲಿಂಗ್ ವಿಭಾಗದಲ್ಲಿ ಮೊನಚು ಕಳೆದುಕೊಂಡಿದೆ. 2018-19ನೇ ಸಾಲಿನಲ್ಲಿ ಆಸೀಸ್ ನೆಲದಲ್ಲಿ ಭಾರತದ ಐತಿಹಾಸಿಕ ಹಾಗೂ ಚೊಚ್ಚಲ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಮೊಹಮ್ಮದ್ ಶಮಿ, 16 ವಿಕೆಟ್‌ಗಳನ್ನು ಕಬಳಿಸಿದ್ದರು. ಅಂದ ಹಾಗೆ ಇಂಗ್ಲೆಂಡ್ ವಿರುದ್ದದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಚೆನ್ನೈನ ಚಿದಂಬರಂ ಮೈದಾನದಲ್ಲಿ ಫೆಬ್ರವರಿ 5ರಂದು ಆರಂಭವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.