ಅಡಿಲೇಡ್ ಆಘಾತ ಮರೆಯುವ ಮುನ್ನುಡಿ ಮೆಲ್ಬರ್ನ್: ನಾಲ್ಕು ದಿನಗಳ ಹಿಂದಿನ ಅಡಿಲೇಡ್ ಆಘಾತವನ್ನು ಮರೆತು ಮುಂದಿನ ಸವಾಲು ಎದುರಿಸುವ ಸಿದ್ಧತೆಗಳಿಗೆ ಭಾರತ ತಂಡವು ಬುಧವಾರ ಮುನ್ನುಡಿ ಬರೆಯಿತು. ಡಿಸೆಂಬರ್ 26ರಂದು ಆಸ್ಟ್ರೇಲಿಯಾ ಎದುರು ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಬಳಗವು ತಾಲೀಮು ಆರಂಭಿಸಿತು. ಬಾರ್ಡರ್‌–ಗಾವಸ್ಕರ್ ಟ್ರೋಫಿ ಜಯದ ಆಸೆಯ ವಿಶ್ವಾಸ ಉಳಿಯಬೇಕಾದರೆ ಈ ಪಂದ್ಯದಲ್ಲಿ ಗೆಲ್ಲುವತ್ತ ಭಾರತ ಚಿತ್ತ ನೆಡಬೇಕಿದೆ. ಆದರೆ ಅದು ಸುಲಭವಲ್ಲ. ಹೋದವಾರ ಅಡಿಲೇಡ್‌ ಓವಲ್‌ನಲ್ಲಿ ಅನುಭವಿಸಿದ ಹೀನಾಯ ಸೋಲಿನ ಕಳಂಕವನ್ನು ಮೆತ್ತಿಕೊಂಡಿರುವ ತಂಡವನ್ನು ಗೆಲುವಿನ ಹಾದಿಗೆ ತರುವ ಸವಾಲು ಮುಂಬೈಕರ್ ರಹಾನೆ ಮುಂದಿದೆ. ಆದ್ದರಿಂದಲೇ ತಂಡದಲ್ಲಿ ಕೆಲವು ಬದಲಾವಣೆಗಳತ್ತ ಅವರು ಚಿತ್ತ ನೆಟ್ಟಿದ್ದಾರೆ. ಆರಂಭಿಕ ಆಟಗಾರ ಪೃಥ್ವಿ ಶಾ ಅವರ ವೈಫಲ್ಯದ ಕಾರಣ ಮಯಂಕ್ ಅಗರವಾಲ್ ಜೊತೆಗೆ ಇನಿಂಗ್ಸ್‌ ಆರಂಭಿಸಲು ಶುಭಮನ್ ಗಿಲ್ ಅವ ರನ್ನು ಆಯ್ಕೆ ಮಾಡುವ ಸಂಭವ ಇದೆ. ಆದ್ದರಿಂದ ಇವರಿಬ್ಬರೂ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದನ್ನು ತಂಡದ ಕೋಚ್ ರವಿಶಾಸ್ತ್ರಿ ಮತ್ತು ರಹಾನೆ ತದೇಕಚಿತ್ತದಿಂದ ಗಮನಿಸಿದರು. 21 ವರ್ಷದ ಗಿಲ್ ಪಿಂಕ್ ಬಾಲ್ ಅಭ್ಯಾಸ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ( 43 ಮತ್ತು 65) ಚೆನ್ನಾಗಿ ಆಡಿದ್ದರು. ಆದರೆ ಅವರನ್ನು ಪಂದ್ಯಕ್ಕೆ ಪರಿಗಣಿಸಿರಲಿಲ್ಲ. ರಣಜಿ ಟೂರ್ನಿಯಲ್ಲಿ ಗಿಲ್ ಪಂಜಾಬ್ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದಾರೆ. ಆದ್ದರಿಂದ ಅವರಿಗೆ ಟೆಸ್ಟ್‌ನಲ್ಲಿ ಪದಾರ್ಪಣೆಯ ಅವಕಾಶ ಲಭಿಸಬಹುದು. ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ಸ್ಥಾನ ನೀಡಬೇಕು ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಸಲಹೆ ನೀಡಿದ್ದಾರೆ. ವಿರಾಟ್ ಕೊಹ್ಲಿಯ ಅನುಪಸ್ಥಿತಿಯಲ್ಲಿ ರಾಹುಲ್ ನಾಲ್ಕು ಅಥವಾ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಸಾಧ್ಯತೆ ಇದೆ. ಅವರೂ ಕೂಡ ನೆಟ್ಸ್‌ನಲ್ಲಿ ಬಹಳಷ್ಟು ಹೊತ್ತು ಬ್ಯಾಟಿಂಗ್ ಮಾಡಿದರು. ಕನ್‌ಕಷನ್‌ನಿಂದ ಚೇತರಿಸಿಕೊಂಡಿರುವ ಆಲ್‌ರೌಂಡರ್ ರವೀಂದ್ರ ಜಡೇಜ ಫೀಲ್ಡಿಂಗ್, ಕ್ಯಾಚಿಂಗ್ ಅಭ್ಯಾಸ ಮಾಡಿದರು. ಟಿ20 ಸರಣಿಯಲ್ಲಿ ಅವರ ಹೆಲ್ಮೆಟ್‌ಗೆ ಚೆಂಡು ತಾಗಿತ್ತು. ಆದ್ದರಿಂದ ಅವರಿಗೆ ಮೊದಲ ಟೆಸ್ಟ್ ನಲ್ಲಿ ವಿಶ್ರಾಂತಿ ಕೊಡಲಾಗಿತ್ತು. ತಮ್ಮ ತವರು ಸೌರಾಷ್ಟ್ರ ತಂಡದ ಸಂಗಾತಿ ಚೇತೇಶ್ವರ್ ಪೂಜಾರ ಅವರಿಗೆ ಜಡೇಜ ನೆಟ್ಸ್‌ನಲ್ಲಿ ಸುಮಾರು ಒಂದು ತಾಸು ಬೌಲಿಂಗ್ ಮಾಡಿದರು. ಇದರಿಂದಾಗಿ ಅವರು ಎರಡನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಭರವಸೆ ಮೂಡಿದೆ. ಅಭ್ಯಾಸದ ಸಂದರ್ಭದಲ್ಲಿ ರವಿಶಾಸ್ತ್ರಿಯವರು ಎಲ್ಲ ಆಟಗಾರರೊಂದಿಗೆ ಪ್ರೋತ್ಸಾಹದ ನುಡಿಗಳನ್ನು ಆಡಿದರು. ರಿಷಭ್ ಪಂತ್ ಜೊತೆಗೆ ಕೆಲಹೊತ್ತು ಮಾತನಾಡಿದರು. ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಬದಲು ಪಂತ್ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ.ಗಾಯಗೊಂಡು ಹೊರಬಿದ್ದಿರುವ ಮೊಹಮ್ಮದ್ ಶಮಿ ಸ್ಥಾನ ತುಂಬುವ ಪೈಪೋಟಿಯಲ್ಲಿರುವ ಮೊಹಮ್ಮದ್ ಸಿರಾಜ್, ನವೀಪದ್ ಸೈನಿ ಮತ್ತು ಶಾರ್ದೂಲ್ ಠಾಕೂರ್ ಬಹಳ ಹೊತ್ತು ಬೌಲಿಂಗ್ ಅಭ್ಯಾಸ ಮಾಡಿದರು. ಈ ನಡುವೆ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಅವರು ಪೃಥ್ವಿ ಶಾ ಜೊತೆಗೆ ಮಾತುಕತೆ ನಡೆಸಿದರು. ಅಶ್ವಿನ್ ವಿಶ್ವದರ್ಜೆಯ ಬೌಲರ್: ನೇಥನ್ ಭಾರತದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ವಿಶ್ವದರ್ಜೆಯ ಬೌಲರ್. ಅವರ ಬೌಲಿಂಗ್ ನೋಡಿ ಬಹಳಷ್ಟು ಕಲಿತಿದ್ದೇನೆ. ಅವರೊಂದಿಗೆ ತಮ್ಮ ಹೋಲಿಕೆ ಸರಿಯಲ್ಲ ಎಂದು ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ನೇಥನ್ ಲಯನ್ ಹೇಳಿದ್ದಾರೆ. ’ನಾವಿಬ್ಬರೂ ಸ್ಪಿನ್ನರ್ ಇರಬಹುದು. ಉತ್ತಮ ಲಯದಲ್ಲಿಯೂ ಬೌಲಿಂಗ್ ಮಾಡುತ್ತಿರಬಹುದು. ಆದರೂ ಹೋಲಿಕೆ ಸರಿಯಲ್ಲ. ನಾನು ಭಾರತದ ಪ್ರವಾಸದಲ್ಲಿದ್ದಾಗ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರ ಬಳಿ ಇರುವ ವಿಭಿನ್ನ ಸ್ಪಿನ್ ತಂತ್ರಗಾರಿಕೆಯನ್ನು ನೋಡಿದ್ದೇನೆ. ಎಲ್ಲ ರೀತಿಯ ವೈವಿಧ್ಯಮಯ ಎಸೆತಗಳನ್ನೂ ಅವರು ಪ್ರಯೋಗಿಸುತ್ತಾರೆ. ಅದರಲ್ಲೂ ಉಪಖಂಡದ ಪಿಚ್‌ಗಳಲ್ಲಿ ಬಹಳ ಪ್ರಭಾವಿಯಾಗಿದ್ದಾರೆ‘ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಲಯನ್ ಹೇಳಿದರು. ಲಯನ್ 97 ಟೆಸ್ಟ್‌ಗಳನ್ನು ಆಡಿ 391 ವಿಕೆಟ್‌ಗಳನ್ನು ಗಳಿಸಿದ್ದಾರೆ. ‘ಬೌಲರ್‌ಗಳ ನಾಯಕ ರಹಾನೆ’ ಅಜಿಂಕ್ಯ ರಹಾನೆ ತಮ್ಮ ಶಾಂತಚಿತ್ತ ಮತ್ತು ಸ್ಪಷ್ಟ ಸಂವಹನದ ಗುಣದಿಂದಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲರು. ವಿಶೇಷವಾಗಿ ಬೌಲರ್‌ಗಳಿಗೆ ಹೆಚ್ಚು ಅನುಕೂಲವಾಗುವ ತಂತ್ರಗಳನ್ನು ಹೆಣೆಯಬಲ್ಲರು ಎಂದು ಅನುಭವಿ ಮಧ್ಯಮವೇಗಿ ಇಶಾಂತ್ ಶರ್ಮಾ ಹೇಳಿದ್ದಾರೆ. ಗಾಯಗೊಂಡಿರುವ ಇಶಾಂತ್ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿಲ್ಲ. ಸರಣಿಯಲ್ಲಿ ಉಳಿದಿರುವ ಮೂರು ಪಂದ್ಯಗಳಲ್ಲಿ ರಹಾನೆ ತಂಡವನ್ನು ಮಯನ್ನಡೆಸುವರು. ಈ ಕುರಿತು ಪ್ರತಿಕ್ರಿಯಿಸಿರುವ ಇಶಾಂತ್, ’ಗಟ್ಟಿ ಮನೋಬಲ ಮತ್ತು ಶಾಂತಸ್ವಭಾವಿಯಾಗಿರು ರಹಾನೆ ಬೌಲರ್‌ಗಳ ನಾಯಕ. ತಂಡದ ಆಟಗಾರರಿಂದ ತಾವಿಟ್ಟಿರುವ ನಿರೀಕ್ಷೆಗಳ ಬಗ್ಗೆ ಅವರಿಗೆ ಸ್ಪಷ್ಟತೆ ಇದೆ‘ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.