’ಹಿಟ್‌ಮ್ಯಾನ್‌‘ ರೋಹಿತ್ ಶರ್ಮಾ ಅಭ್ಯಾಸ ಆರಂಭ ಮೆಲ್ಬರ್ನ್: ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಗುರುವಾರ ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದರು. ಮೆಲ್ಬರ್ನ್ ಟೆಸ್ಟ್‌ನಲ್ಲಿ ಗೆದ್ದ ನಂತರ ತಂಡದ ಉಳಿದೆಲ್ಲ ಆಟಗಾರರು ಎರಡು ದಿನಗಳ ಬಿಡುವು ತೆಗೆದುಕೊಂಡಿದ್ದಾರೆ. ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಅವರ ಮಾರ್ಗದರ್ಶನದಲ್ಲಿ ರೋಹಿತ್ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಬುಧವಾರವಷ್ಟೇ ರೋಹಿತ್ ಮೇಲ್ಬರ್ನ್‌ನಲ್ಲಿರುವ ಭಾರತ ತಂಡವನ್ನು ಸೇರಿಕೊಂಡಿದ್ದರು. ಐಪಿಎಲ್‌ ಸಂದರ್ಭದಲ್ಲಿ ಗಾಯಗೊಂಡಿದ್ದ ಅವರು ಆಸ್ಟ್ರೇಲಿಯಾ ಎದುರಿನ ಟಿ20 ಮತ್ತು ಏಕದಿನ ಸರಣಿಗಳಲ್ಲಿ ಆಡಿರಲಿಲ್ಲ. ಬೆಂಗಳೂರಿನ ಎನ್‌ಸಿಎನಲ್ಲಿ ಚಿಕಿತ್ಸೆ ಪಡೆದು ಫಿಟ್‌ ಆಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಅಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್‌ ಪಾಲಿಸಿದ ನಂತರ ತಂಡ ಸೇರಿಕೊಂಡಿದ್ದರು. ’ಎಂಜಿನ್ ಇದೀಗ ಶುರುವಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾಮರ್ಥ್ಯ ತೋರುವುದರ ಭರವಸೆ ಮೂಡಿಸಿದೆ‘ ಎಂದು ಬಿಸಿಸಿಐ ರೋಹಿತ್ ಬಗ್ಗೆ ಟ್ವೀಟ್ ಮಾಡಿದೆ. 33 ವರ್ಷದ ರೋಹಿತ್ ಅವರಿಗೆ ನೆಟ್ಸ್‌ನಲ್ಲಿ ಥ್ರೋಡೌನ್ ಪರಿಣತರಾದ ಕರ್ನಾಟಕದ ರಘು, ಶ್ರೀಲಂಕೆಯ ನುವಾನ ಸೆನೆವಿರಾಟ್ನೆ ಮತ್ತು ದಯಾನಂದ ಗರಣಿ ಅವರು ಎಸೆತಗಳನ್ನು ಹಾಕಿದರು. ಇದೇ 4ರಂದು ತಂಡವು ಸಿಡ್ನಿಗೆ ತೆರಳಲಿದೆ. 7ರಂದು ಮೂರನೇ ಟೆಸ್ಟ್ ಆರಂಭವಾಗಲಿದೆ. ತಂಡವು ಸರಣಿಯಲ್ಲಿ 1–1ರಿಂದ ಸಮಬಲ ಸಾಧಿಸಿದೆ. ಕಳೆದೆರಡೂ ಟೆಸ್ಟ್‌ಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಮಯಂಕ್ ಅಗರವಾಲ್ ನಿರೀಕ್ಷಿತ ಬ್ಯಾಟಿಂಗ್ ಮಾಡಿರಲಿಲ್ಲ. ಆದ್ದರಿಂದ ಅವರಿಗೆ ವಿಶ್ರಾಂತಿ ಕೊಟ್ಟು ರೋಹಿತ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ’ಶುಭಮನ್ ಗಿಲ್ ಜೊತೆಗೆ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಬೇಕು‘ ಎಂದು ಈಚೆಗೆ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಸಲಹೆ ನೀಡಿದ್ದರು. ಮೆಲ್ಬರ್ನ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಗಿಲ್, ಭರವಸೆಯ ಬ್ಯಾಟಿಂಗ್ ಮಾಡಿದ್ದರು. ಮುಂಬೈಕರ್ ರೋಹಿತ್ 32 ಟೆಸ್ಟ್‌ಗಳನ್ನು ಆಡಿದ್ದಾರೆ. 2141 ರನ್‌ಗಳು ಅವರ ಖಾತೆಯಲ್ಲಿವೆ. ಆರು ಶತಕ ಮತ್ತು ಹತ್ತು ಅರ್ಧಶತಕಗಳು ಅದರಲ್ಲಿ ಸೇರಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.