ಕ್ರಿಕೆಟ್: ಒಮನ್‌ಗೆ ಮಣಿದ ಮುಂಬೈ ಮಸ್ಕತ್: ಆತಿಥೇಯ ಒಮನ್ ತಂಡವು ಮುಂಬೈ ಕ್ರಿಕೆಟ್ ತಂಡದ ಎದುರು ಟ್ವೆಂಟಿ–20 ಸರಣಿಯನ್ನು ಜಯಿಸಿತು. ಶುಕ್ರವಾರ ನಡೆದ ಸರಣಿಯ ಮೂರನೇ ಪಂದ್ಯದಲ್ಲಿ ಒಮನ್ ತಂಡವು ಮೂರು ವಿಕೆಟ್‌ಗಳಿಂದ ಮುಂಬೈ ಎದುರು ಗೆದ್ದಿತು. ಭಾರತದ ದೇಶಿ ಕ್ರಿಕೆಟ್‌ನಲ್ಲಿ ದಿಗ್ಗಜ ತಂಡವಾಗಿರುವ ಮುಂಬೈ ತಂಡವು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿತು. ಆದರೆ, ಆತಿಥೇಯ ತಂಡದ ಸ್ಪಿನ್ನರ್ ಆಕಿಬ್ ಇಲಿಯಾಸ್ (22ಕ್ಕೆ3) ಅಮೋಘ ಬೌಲಿಂಗ್‌ ಮುಂದೆ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 135 ರನ್‌ ಗಳಿಸಿತು. ತಂಡದ ಆರಂಭಿಕ ಆಟಗಾರ ಆಕರ್ಷಿತ್ ಗೊಮೆಲ್ 34 ರನ್ ಗಳಿಸಿದರು. ಸುಜಿತ್ ನಾಯಕ್ (25) ತಮ್ಮ ಕಾಣಿಕೆ ನೀಡಿದರು. ಗುರಿ ಬೆನ್ನತ್ತಿದ ಒಮನ್ ತಂಡವು ಜತಿಂದರ್‌ಸಿಂಗ್ (46; 28ಎಸೆತ, 3ಬೌಂಡರಿ, 5ಸಿಕ್ಸರ್) ಉತ್ತಮ ಬ್ಯಾಟಿಂಗ್‌ನಿಂದ ಗೆಲುವಿನತ್ತ ಸಾಗಿತು. ಒಂದು ಹಂತದಲ್ಲಿ ಒಮನ್ ತಂಡವು 96 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿತ್ತು. ಆದರೆ, ತಂಡದ ಸಂದೀಪ್ ಗೌಡ (ಔಟಾಗದೆ 29) ಮತ್ತು ಕಲೀಮುಲ್ಲಾ (ಔಟಾಗದೇ 9) ಎಂಟನೇ ವಿಕೆಟ್ ಜೊತೆಯಾಟದಲ್ಲಿ 24 ರನ್‌ ಸೇರಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. ಸರಣಿಯ ಮೊದಲ ಪಂದ್ಯದಲ್ಲಿ ಮುಂಬೈ ಸೋತಿತ್ತು. ಎರಡನೇ ಪಂದ್ಯದಲ್ಲಿ ಜಯಿಸಿತ್ತು. ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿಗೆ ಯುಎಇಯೊಂದಿಗೆ ಒಮನ್ ಕೂಡ ಜಂಟಿ ಆತಿಥ್ಯ ವಹಿಸುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.