: ನೌಮಾನ್‌, ಯಾಸಿರ್ ಕೈಚಳಕ: ಪಾಕ್‌ ಜಯಭೇರಿ ಕರಾಚಿ: ಸ್ಪಿನ್ನರ್‌ಗಳಾದ ನೌಮಾನ್ ಅಲಿ (35ಕ್ಕೆ 5) ಹಾಗೂ ಯಾಸಿರ್ ಶಾ (79ಕ್ಕೆ 4) ಅವರ ಕೈಚಳಕದ ಬಲದಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಭರ್ಜರಿ ಜಯ ಗಳಿಸಿತು. ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ಕೊನೆಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿಆತಿಥೇಯ ತಂಡಕ್ಕೆ ಏಳು ವಿಕೆಟ್‌ಗಳ ಗೆಲುವು ಒಲಿಯಿತು. ಪದಾರ್ಪಣೆ ಟೆಸ್ಟ್‌ನಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಿದ 34 ವರ್ಷದ ನೂಮಾನ್‌ ಹಾಗೂ ಯಾಸಿರ್‌ ಶಾ ಪ್ರವಾಸಿ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ 245 ರನ್‌ಗಳಿಗೆ ನಿಯಂತ್ರಿಸಿದರು.ಪಂದ್ಯದಲ್ಲಿ ಇವರಿಬ್ಬರು ಒಟ್ಟು 14 ವಿಕೆಟ್‌ಗಳನ್ನು ಹಂಚಿಕೊಂಡರು. ನಾಲ್ಕನೇ ದಿನದಲ್ಲಿ ಪಂದ್ಯ ಮುಕ್ತಾಯವಾಯಿತು. ಶುಕ್ರವಾರದ ದಿನದಾಟದಲ್ಲಿ ಹರಿಣ ಪಡೆ 6 ವಿಕೆಟ್ ಕಳೆದುಕೊಂಡು 58 ರನ್‌ ಗಳಿಸಲಷ್ಟೇ ಶಕ್ತವಾಯಿತು. ಕೇವಲ 88 ರನ್‌ಗಳ ಗುರಿ ಪಡೆದ ಪಾಕಿಸ್ತಾನ 22.5 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು. ಅಜರ್ ಅಲಿ (ಔಟಾಗದೆ 31) ಕಾಣಿಕೆ ನೀಡಿದರು. ದಕ್ಷಿಣ ಆಫ್ರಿಕಾ ತಂಡದ ಆ್ಯನ್ರಿಚ್ ನಾರ್ಟಿಯೆ (24ಕ್ಕೆ 2) ಉತ್ತಮ ಬೌಲಿಂಗ್ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ 27 ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನಕ್ಕೆ ಇದು ಕೇವಲ ಐದನೇ ಜಯ. 72 ವರ್ಷಗಳ ಬಳಿಕ, ಪದಾರ್ಪಣೆ ಟೆಸ್ಟ್ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಐದು ವಿಕೆಟ್‌ ಗಳಿಸಿದ ಅತಿ ಹಿರಿಯ (34 ವರ್ಷ, 111 ದಿನ) ಬೌಲರ್ ಎನಿಸಿಕೊಂಡರು ನೌಮಾನ್‌. 1949ರಲ್ಲಿ ನ್ಯೂಜಿಲೆಂಡ್‌ನ ಮಧ್ಯಮವೇಗಿ ಫೆನ್‌ ಕ್ರೆಸ್‌ವೆಲ್‌ (34 ವರ್ಷ 144 ದಿನ) ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಪಂದ್ಯ ರಾವಲ್ಪಿಂಡಿಯಲ್ಲಿ ಫೆಬ್ರುವರಿ 8ರಿಂದ ನಡೆಯಲಿದೆ. ಸಂಕ್ಷಿಪ್ತ ಸ್ಕೋರು ಮೊದಲ ಇನಿಂಗ್ಸ್ ದಕ್ಷಿಣ ಆಫ್ರಿಕಾ: 69.2 ಓವರ್‌ಗಳಲ್ಲಿ 220,ಪಾಕಿಸ್ತಾನ:119.2 ಓವರ್‌ಗಳಲ್ಲಿ 378 ಎರಡನೇ ಇನಿಂಗ್ಸ್ ದಕ್ಷಿಣ ಆಫ್ರಿಕಾ (ಗುರುವಾರ 75 ಓವರ್‌ಗಳಲ್ಲಿ 4ಕ್ಕೆ 187):100.3 ಓವರ್‌ಗಳಲ್ಲಿ 245 (ಏಡನ್ ಮರ್ಕರಂ 74, ಡೀನ್ ಎಲ್ಗರ್ 29, ರಸಿ ವ್ಯಾನ್ ಡರ್ ಡಸೆನ್ 64, ತೆಂಬಾ ಬವುಮಾ 40; ಯಾಸೀರ್ ಶಾ 79ಕ್ಕೆ 4, ನೌಮಾನ್ ಅಲಿ 35ಕ್ಕೆ 5). ಪಾಕಿಸ್ತಾನ: 22.5 ಓವರ್‌ಗಳಲ್ಲಿ 3 ವಿಕೆಟ್‌ಗೆ 90 (ಅಜರ್ ಅಲಿ ಔಟಾಗದೆ 31, ಬಾಬರ್ ಆಜಂ 30; ಆ್ಯನ್ರಿಚ್ ನಾರ್ಟಿಯೆ 24ಕ್ಕೆ 2, ಕೇಶವ್ ಮಹಾರಾಜ್‌ 12ಕ್ಕೆ 1). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.