ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಫೈನಲ್‌ಗೆ ಲಗ್ಗೆ ಇಟ್ಟ ತಮಿಳುನಾಡು ಅಹಮದಾಬಾದ್: ದಿನೇಶ್ ಕಾರ್ತಿಕ್ ನಾಯಕತ್ವದ ತಮಿಳುನಾಡು ತಂಡವು ಸತತ ಎರಡನೇ ವರ್ಷ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಎಂ. ಮೊಹಮ್ಮದ್ (24ಕ್ಕೆ4) ಅವರ ಬೌಲಿಂಗ್ ಮತ್ತು ಅರುಣ ಕಾರ್ತಿಕ್ (ಔಟಾಗದೆ 89; 54ಎಸೆತ, 9ಬೌಂಡರಿ, 3ಸಿಕ್ಸರ್) ಅಬ್ಬರದ ಬ್ಯಾಟಿಂಗ್‌ನಿಂದ ತಮಿಳುನಾಡು ತಂಡವು ರಾಜಸ್ಥಾನ ವಿರುದ್ಧ7 ವಿಕೆಟ್‌ಗಳಿಂದ ಜಯಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 154 ರನ್ ಗಳಿಸಿತು. ಗುರಿ ಬೆನ್ನಟ್ಟಿದ ತಮಿಳುನಾಡು 18.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 158 ರನ್ ಗಳಿಸಿ ಜಯಿಸಿತು. ಹೋದ ವರ್ಷದ ಟೂರ್ನಿಯ ಫೈನಲ್‌ನಲ್ಲಿ ತಮಿಳುನಾಡು ತಂಡವು ಕರ್ನಾಟಕದ ಎದುರು ಸೋಲನುಭವಿಸಿತ್ತು. ರಾಜಸ್ಥಾನ ತಂಡದ ನಾಯಕ ಅಶೋಕ್ ಮನೇರಿಯಾ (51 ರನ್) ಮತ್ತು ಅಜಿತ್ ಗುಪ್ತಾ (45 ರನ್) ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಆದರೆ ಆರಂಭಿಕ ಬ್ಯಾಟ್ಸ್‌ಮನ್ ಭರತ್ ಶರ್ಮಾ, ಮಹಿಪಾಲ್ ಲೊಮ್ರೊರ್ ಹಾಗೂ ಕೆಳಕ್ರಮಾಂಕದ ಬ್ಯಾಟಿಂಗ್ ಪಡೆ ವೈಫಲ್ಯ ಅನುಭವಿಸಿತು. ತಮಿಳುನಾಡು ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ಮೂರನೇ ಓವರ್‌ನಲ್ಲಿ ತನ್ವೀರ್ ಉಲ್ ಹಕ್ ಎಸೆತದಲ್ಲಿ ಹರಿ ನಿಶಾಂತ್ ಎಲ್‌ಬಿಡಬ್ಲ್ಯು ಆದರು. ಜಗದೀಶನ್ 28 ರನ್ ಗಳಿಸಿದರು. ಆದರೆ, ಬಾಬಾ ಅಪರಾಜಿತ್ ಕೇವಲ 2 ರನ್ ಗಳಿಸಿ ನಿರ್ಗಮಿಸಿದರು. ಇದರಿಂದಾಗಿ ತುಸು ಒತ್ತಡದಲ್ಲಿದ್ದ ತಂಡವನ್ನು ಅರುಣ್ ಮತ್ತು ದಿನೇಶ್ ಪಾರು ಮಾಡಿದರು. ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 89 ರನ್‌ಗಳನ್ನು ಸೇರಿಸಿದರು. ಸಂಕ್ಷಿಪ್ತ ಸ್ಕೋರು ರಾಜಸ್ಥಾನ: 20 ಓವರ್‌ಗಳಲ್ಲಿ 9ಕ್ಕೆ154 (ಆದಿತ್ಯ ಗರ್ವಾಲ್ 29, ಅಶೋಕ್ ಮನೇರಿಯಾ 51, ಅಜಿತ್ ಗುಪ್ತಾ 45, ಸಾಯಿಕಿಶೋರ್ 16ಕ್ಕೆ2, ಎಂ. ಮೊಹಮ್ಮದ್ 24ಕ್ಕೆ4) ತಮಿಳುನಾಡು: 18.4 ಓವರ್‌ಗಳಲ್ಲಿ 3ಕ್ಕೆ158 (ಎನ್. ಜಗದೀಶನ್ 28, ಅರುಣ್ ಕಾರ್ತಿಕ್ ಔಟಾಗದೆ 89, ದಿನೇಶ್ ಕಾರ್ತಿಕ್ ಔಟಾಗದೆ 26, ತನ್ವೀರ್ ಉಲ್ ಹಕ್ 22ಕ್ಕೆ1, ಅನಿಕೇತ್ ಚೌಧರಿ 29ಕ್ಕೆ1, ರವಿ ಬಿಷ್ಣೋಯಿ 32ಕ್ಕೆ1) ಫಲಿತಾಂಶ: ತಮಿಳುನಾಡು ತಂಡಕ್ಕೆ 7 ವಿಕೆಟ್‌ಗಳ ಜಯ. ಫೈನಲ್‌ಗೆ ಪ್ರವೇಶ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.