ವಿಜಯ್‌ ಹಜಾರೆ ಟ್ರೋಫಿ: ಮುಂಬೈ ಸಂಭಾವ್ಯ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್, ಪೃಥ್ವಿ ಮುಂಬೈ: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಹಾಗೂ ಯುವ ಮಧ್ಯಮವೇಗಿ ಅರ್ಜುನ್ ತೆಂಡೂಲ್ಕರ್ ಅವರು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಗಾಗಿ ಪ್ರಕಟಿಸಲಾದ ಮುಂಬೈ ಸಂಭಾವ್ಯ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಮುಂಬೈ ಕ್ರಿಕೆಟ್ ಸಂಸ್ಥೆಯು (ಎಂಸಿಎ) 104 ಆಟಗಾರರ ಹೆಸರುಗಳನ್ನು ಶನಿವಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಭಾರತ ತಂಡದ ಮಾಜಿ ಆಟಗಾರ, ಬ್ಯಾಟಿಂಗ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್‌, ಸೈಯದ್‌ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಹರಿಯಾಣ ವಿರುದ್ಧ ನಡೆದ ಪಂದ್ಯದ ಮೂಲಕ ಮುಂಬೈ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಮುಂಬೈ ಸೋಲು ಅನುಭವಿಸಿತ್ತು. ಓದಿ:ಕೆಲವೊಮ್ಮೆ ರನ್‌ ಗಳಿಕೆಗಿಂತ ಕ್ರೀಸ್‌ನಲ್ಲಿ ‘ಲಂಗರು’ ಹಾಕುವುದೂ ಮುಖ್ಯ: ಪೂಜಾರ ಪೃಥ್ವಿ ಶಾ ಅವರು ಆಸ್ಟ್ರೇಲಿಯಾ ವಿರುದ್ದ ಇತ್ತೀಚೆಗೆ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದಲ್ಲಿ ಇದ್ದರು. ಅಡಿಲೇಡ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಮಾತ್ರ ಅವರು ಕಣಕ್ಕಿಳಿದಿದ್ದರು. ಆ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ಸೋತಿತ್ತು. ಆದರೆ ಸರಣಿಯನ್ನು 2–1ರಿಂದ ಗೆದ್ದುಕೊಂಡಿತ್ತು. ಅರ್ಜುನ್, ಪೃಥ್ವಿ ಅಲ್ಲದೆ, ರಾಷ್ಟ್ರೀಯ ತಂಡದ ಬ್ಯಾಟ್ಸ್‌ಮನ್‌ ಶ್ರೇಯಸ್ ಅಯ್ಯರ್, ಆಲ್‌ರೌಂಡರ್ ಶಿವಂ ದುಬೆ, ಸೂರ್ಯಕುಮಾರ್ ಯಾದವ್‌, ಆದಿತ್ಯ ತಾರೆ, ಸಿದ್ದೇಶ್ ಲಾಡ್‌, ಯಶಸ್ವಿ ಜೈಸ್ವಾಲ್‌, ಸರ್ಫರಾಜ್ ಖಾನ್‌ ಹಾಗೂ ಆರ್ಮಾನ್ ಜಾಫರ್, ಅನುಭವಿ ವೇಗಿ ಧವಳ್ ಕುಲಕರ್ಣಿ ಕೂಡ ಮುಂಬೈ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.