ಫೆಬ್ರುವರಿ 8ರಿಂದ ಅಂಧರ ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿ ಬೆಂಗಳೂರು: ಭಾರತೀಯ ಅಂಧರ ಕ್ರಿಕೆಟ್‌ ಸಂಸ್ಥೆ (ಸಿಎಬಿಐ), ಸಮರ್ಥನಂ ಟ್ರಸ್ಟ್‌ ಸಹಭಾಗಿತ್ವದಲ್ಲಿ ಮೂರನೇ ಇಂಡಸ್‌ಇಂಡ್‌ ಬ್ಯಾಂಕ್‌ ಅಂಧರ ನಾಗೇಶ್‌ ಟ್ರೋಫಿ ರಾಷ್ಟ್ರೀಯ ಟಿ20 ಕ್ರಿಕೆಟ್‌ ಟೂರ್ನಿ ಫೆಬ್ರುವರಿ 8ರಂದು ಆರಂಭವಾಗಲಿದೆ. ಟೂರ್ನಿಯಲ್ಲಿ 24 ರಾಜ್ಯಗಳ 350 ಆಟಗಾರರು ಭಾಗವಹಿಸುತ್ತಿದ್ದಾರೆ. ನಾಲ್ಕು ಗುಂಪುಗಳಲ್ಲಿ ತಲಾ ಎಂಟು ತಂಡಗಳಿವೆ. ಲೀಗ್‌ ಮತ್ತು ನಾಕೌಟ್‌ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಪ್ರತಿ ಗುಂಪಿನಿಂದ ಅಗ್ರಸ್ಥಾನದಲ್ಲಿರುವ ಎರಡು ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ. 16ರಂದು ಫೈನಲ್‌ ನಡೆಯಲಿದೆ. ಕರ್ನಾಟಕ ತಂಡವು ಬಿ ಗುಂಪಿನಲ್ಲಿದ್ದು, ಮಹಾರಾಷ್ಟ್ರ, ಕೇರಳ, ರಾಜಸ್ತಾನ, ಜಾರ್ಖಂಡ್ ಹಾಗೂ ಉತ್ತರ ಪ್ರದೇಶ ತಂಡಗಳೂ ಈ ಗುಂಪಿನಲ್ಲಿವೆ. ಫೆಬ್ರುವರಿ 8ರಂದು ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಜಾರ್ಖಂಡ್‌ ಸವಾಲು ಎದುರಾಗಿದೆ. ಅಲ್ಟಾಯರ್ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9.30ರಿಂದ ಈ ಪಂದ್ಯ ನಡೆಯಲಿದೆ. ಬೆಂಗಳೂರಿನ ಹೊರವಲಯದಲ್ಲಿರುವ ನಿರ್ಮಾಣ್‌ ಕ್ರೀಡಾಂಗಣ, ಸಚಿನ್‌ ತೆಂಡೂಲ್ಕರ್‌, ಅಲ್ಟಾಯರ್‌, ಅಥೆನಾ, ಮತ್ತು ಪಿಎಸ್‌ಎ ಕ್ರೀಡಾಂಗಣಗಳಲ್ಲಿ ಎರಡು ಅವಧಿಗಳಲ್ಲಿ ಪಂದ್ಯಗಳು ನಿರಂತರವಾಗಿ ನಡೆಯಲಿವೆ. ಫೆಬ್ರುವರಿ 7ರಂದು ಬೊಮ್ಮಸಂದ್ರದ ಗೀಗಾಬೈಟ್‌ ಕಾನ್ಫರೆನ್ಸ್‌ ಸಭಾಂಗಣದಲ್ಲಿ ಆನೆಕಲ್‌ ಶಾಸಕ ಬಿ. ಶಿವಣ್ಣ ಟೂರ್ನಿಯನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಕ್ರಿಕೆಟ್‌ ತಂಡದ ಮಾಜಿ ಮ್ಯಾನೇಜರ್‌ ಬಿ. ಸಿದ್ದರಾಮು, ಹೆಲ್ತ್‌ ಸೊಲ್ಯೂಷನ್ಸ್‌ ಇಂಡಿಯಾದ ಸಿಇಒ ಡಾ. ಆನಂದ್‌ ಲಕ್ಷ್ಮಣ್‌, ಸಮರ್ಥನಂ ಟ್ರಸ್ಟ್‌ನ ಸ್ಥಾಪಕ ಡಾ. ಮಹಾಂತೇಶ್‌ ಜಿ. ಕೆ. ಪಾಲ್ಗೊಳ್ಳುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.