ಟೆಸ್ಟ್ ಕ್ರಿಕೆಟ್‌ಗೆ ಫಾಫ್ ಡುಪ್ಲೆಸಿ ವಿದಾಯ ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 36 ವರ್ಷದ ಫಾಫ್ ವಿದಾಯದ ಘೋಷಣೆಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಮಾಡಿದ್ದಾರೆ. ’ಕಳೆದೊಂದು ವರ್ಷದಲ್ಲಿ ನಮಗೆಲ್ಲ ಅಗ್ನಿಪರೀಕ್ಷೆ ಎದುರಾಗಿತ್ತು. ಹಲವು ಅನಿರೀಕ್ಷಿತ ಪರಿಸ್ಥಿತಿಗಳನ್ನು ದಾಟಿ ಬಂದಿದ್ದೇವೆ. ಈ ಹೊತ್ತಿನಲ್ಲಿ ನಾನು ಹಾರ್ದಿಕವಾಗಿ ಹೊಸ ಅಧ್ಯಾಯ ಆರಂಭಿಸಲು ಬಯಸುತ್ತೇನೆ. ಹೊಸ ಹೆಜ್ಜೆ ಇಡಲು ಇದು ಸಕಾಲ. ದೇಶದ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದ್ದು ದೊಡ್ಡ ಗೌರವ. ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ಈಗ ಕಾಲ ಕೂಡಿಬಂದಿದೆ‘ ಎಂದು ಸಂದೇಶ ಬರೆದಿದ್ಧಾರೆ. ’ಮುಂದಿನ ಎರಡು ವರ್ಷಗಳು ಐಸಿಸಿ ಟಿ20 ವಿಶ್ವಕಪ್ ನಡೆಯಲಿವೆ. ಆದ್ದರಿಂದ ಚುಟುಕು ಮಾದರಿಯ ಮೇಲೆ ಹೆಚ್ಚು ಗಮನ ಹರಿಸುತ್ತೇನೆ. ಜಗತ್ತಿನೆಲ್ಲೆಡೆ ಸಾಧ್ಯವಾದಷ್ಟೂ ಹೆಚ್ಚಿನ ಸಂಖ್ಯೆಯಲ್ಲಿ ಟಿ20 ಪಂದ್ಯಗಳನ್ನು ಆಡುವುದು ನನ್ನ ಗುರಿ‘ ಎಂದು ತಮ್ಮ ಮುಂದಿನ ಯೋಜನೆಗಳನ್ನೂ ಉಲ್ಲೇಖಿಸಿದ್ದಾರೆ. ಡುಪ್ಲೆಸಿ 69 ಟೆಸ್ಟ್‌ಗಳನ್ನು ಆಡಿದ್ದಾರೆ. ಅದರಲ್ಲಿ 4163 ರನ್‌ಗಳನ್ನು ಗಳಿಸಿದ್ದಾರೆ. ಅದರಲ್ಲಿ 10 ಶತಕ ಮತ್ತು 21 ಅರ್ಧಶತಕಕಗಳು ಸೇರಿವೆ. ಹೋದ ವರ್ಷ ಫಾಫ್ ದಕ್ಷಿಣ ಆಫ್ರಿಕಾದ ಟೆಸ್ಟ್ ಮತ್ತು ಟಿ20 ತಂಡಗಳ ನಾಯಕತ್ವದಿಂದ ಕೆಳಗಿಳಿದಿದ್ದರು. 2016ರಲ್ಲಿ ಎಬಿ ಡಿವಿಲಿಯರ್ಸ್‌ ನಾಯಕತ್ವ ಬಿಟ್ಟ ಮೇಲೆ ಫಾಫ್ ತಂಡವನ್ನು 36 ಟೆಸ್ಟ್‌ಗಳಲ್ಲಿ ಮುನ್ನಡೆಸಿದ್ದರು. 18ರಲ್ಲಿ ತಂಡವು ಜಯಿಸಿತ್ತು. ಬಲಗೈ ಬ್ಯಾಟ್ಸ್‌ಮನ್ ಫಾಫ್ 143 ಏಕದಿನ, 50 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.