ಐಪಿಎಲ್ 14ನೇ ಆವೃತ್ತಿ: ಕಿಂಗ್ಸ್ ಇಲೆವೆನ್ ಪಂಜಾಬ್ ಈಗ ಪಂಜಾಬ್ ಕಿಂಗ್ಸ್ ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬರುವ ಆವೃತ್ತಿಯಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪಂಜಾಬ್ ಕಿಂಗ್ಸ್ ಎಂದು ಕರೆಯಲಾಗುತ್ತದೆ, ದೀರ್ಘ ಸಮಾಲೋಚನೆ ಬಳಿಕ ತಂಡದ ಮಾಲೀಕರು ಹೆಸರಿನಲ್ಲಿ ಬದಲಾವಣೆ ಮಾಡಿದ್ದಾರೆ. ಯುಎಇಯಲ್ಲಿ ನಡೆದ ಟಿ 20 ಐಪಿಎಲ್ ಸರಣಿಯ ಕಳೆದ ಆವೃತ್ತಿಯಲ್ಲಿ ಸ್ಪರ್ಧಿಸಿದ ಎಂಟು ತಂಡಗಳಲ್ಲಿ ಕಿಂಗ್ ಇಲೆವೆನ್ ಪಂಜಾಬ್ ಕೂಡ ಒಂದು. "ತಂಡವು ದೀರ್ಘಕಾಲದಿಂದ ಹೆಸರು ಬದಲಾಯಿಸಲು ಯೋಜಿಸುತ್ತಿತ್ತು. ಹಾಗಾಗಿ, ಈ ವರ್ಷ ಐಪಿಎಲ್ ಸರಣಿಗೂ ಮೊದಲೇ ಇದನ್ನು ಮಾಡಬೇಕೆಂದು ಯೋಚಿಸಿದೆ. ಆದ್ದರಿಂದ ಇದು ಹಠಾತ್ ನಿರ್ಧಾರವಲ್ಲ" ಎಂದು ಬಿಸಿಸಿಐ ಮೂಲವು ಸೋಮವಾರ ಪಿಟಿಐಗೆ ತಿಳಿಸಿದೆ. 2008 ರಲ್ಲಿ ಐಪಿಎಲ್ ಆರಂಭದಿಂದಲೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಮೋಹಿತ್ ಬರ್ಮನ್, ನೆಸ್ ವಾಡಿಯಾ, ಪ್ರೀತಿ ಜಿಂಟಾ ಮತ್ತು ಕರಣ್ ಪಾಲ್ ಜಂಟಿ ಒಡೆತನದಲ್ಲಿದೆ. ಆದರೆ, ಇದುವರೆಗೂ ತಂಡ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. ಐಪಿಎಲ್ ಪಂದ್ಯಾವಳಿಯ 13 ವರ್ಷಗಳ ಇತಿಹಾಸದಲ್ಲಿ, ಪಂಜಾಬ್ ಒಮ್ಮೆ ರನ್ನರ್-ಅಪ್ ಆಗಿದ್ದರೆ, ಮತ್ತೊಂದು ಬಾರಿ ಮೂರನೇ ಸ್ಥಾನವನ್ನು ಗಳಿಸಿತ್ತು. ಏಪ್ರಿಲ್ ಎರಡನೇ ವಾರದಲ್ಲಿ ಈ ವರ್ಷದ ಐಪಿಎಲ್ ಸರಣಿ ಪ್ರಾರಂಭವಾಗಲಿದ್ದು, ಗುರುವಾರ ಆಟಗಾರರ ಹರಾಜು ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.