ಪೃಥ್ವಿ ಶಾ ಶತಕ; ದೆಹಲಿ ಮಣಿಸಿದ ಮುಂಬೈ ಜೈಪುರ: ‍ಪೃಥ್ವಿ ಶಾ ಅವರ ಅಮೋಘ ಶತಕ ಮತ್ತು ಬೌಲರ್‌ಗಳ ಕರಾರುವಾಕ್ ದಾಳಿಗೆ ನಲುಗಿದ ದೆಹಲಿ ತಂಡ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಮುಂಬೈಗೆ ಏಳು ವಿಕೆಟ್‌ಗಳಿಂದ ಮಣಿಯಿತು. ಈ ಮೂಲಕ ದೇಶಿ ಕ್ರಿಕೆಟ್‌ನ ಪ್ರಬಲ ಶಕ್ತಿಯಾದ ಮುಂಬೈ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಜೈಪುರಿಯಾ ವಿದ್ಯಾಲಯ ಮೈದಾನದಲ್ಲಿ ಭಾನುವಾರ ನಡೆದ ಎಲೀಟ್ ‘ಡಿ‘ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ಪರ ಹಿಮ್ಮತ್ ಸಿಂಗ್ ಭರ್ಜರಿ ಶತಕ ಗಳಿಸಿ ಮಿಂಚಿದರು. ಆದರೂ ವೇಗಿ ಧವಳ್ ಕುಲಕರ್ಣಿ ಅವರ ಪ್ರಭಾವಿ ದಾಳಿಯಿಂದಾಗಿ ತಂಡಕ್ಕೆ 211 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಗುರಿ ಬೆನ್ನತ್ತಿದ ಮುಂಬೈ 31.5 ಓವರ್‌ಗಳಲ್ಲಿ ದಡ ಸೇರಿತು.ಪೃಥ್ವಿ ಶಾ (105; 89 ಎಸೆತ, 15 ಬೌಂಡರಿ, 2 ಸಿಕ್ಸರ್‌) ಮತ್ತು ಸೂರ್ಯಕುಮಾರ್ ಯಾದವ್ (50; 33ಎ, 6 ಬೌಂ, 2 ಸಿ) ಗೆಲುವಿನ ರೂವಾರಿ ಆದರು. ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ದುಕೊಂಡಿತು. ದೆಹಲಿ ಖಾತೆ ತೆರೆಯುವ ಮೊದಲೇ ಎರಡು ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅನುಜ್ ರಾವತ್ ಮತ್ತು ಶಿಖರ್ ಧವನ್ ರನ್‌ ಔಟ್‌ ಆಗಿ ಮರಳಿದರು. ನಾಲ್ಕನೇ ಕ್ರಮಾಂಕದ ನಿತೀಶ್ ರಾಣಾ ಎರಡು ರನ್‌ ಗಳಿಸಿ ಔಟಾದರು. ಜಾಂಟಿ ಸಿದ್ದು, ಕ್ಷಿತಿಜ್ ಶರ್ಮಾ ಮತ್ತು ಲಲಿತ್ ಯಾದವ್ ಕೂಡ ಮರಳುವುದರೊಂದಿಗೆ ತಂಡ ತೀರ ಸಂಕಷ್ಟಕ್ಕೆ ಸಿಲುಕಿತು. 32ಕ್ಕೆ6 ವಿಕೆಟ್ ಕಳೆದುಕೊಂಡ ದೆಹಲಿಗೆ ಮೂರನೇ ಕ್ರಮಾಂಕದ ಹಿಮ್ಮತ್ ಸಿಂಗ್ (106; 145 ಎ, 6 ಬೌಂ, 2 ಸಿ) ಮತ್ತು ಎಂಟನೇ ಕ್ರಮಾಂಕದ ಶಿವಾಂಕ್ ವಸಿಷ್ಠ್‌ (55; 70ಎ, 6 ಬೌಂ) ಆಸರೆಯಾದರು. ಏಳನೇ ವಿಕೆಟ್‌ಗೆ ಇವರಿಬ್ಬರು 122 ರನ್‌ಗಳನ್ನು ಸೇರಿಸಿದರು. ವಸಿಷ್ಠ್ ಔಟಾದ ನಂತರ ನಾಯಕ ಪ್ರದೀಪ್ ಸಾಂಗ್ವಾನ್ ಜೊತೆಗೂಡಿ ಹಿಮ್ಮತ್ ಸಿಂಗ್ ಶತಕ ಪೂರೈಸಿದರು. ಮುರಿಯದ ಎಂಟನೇ ವಿಕೆಟ್‌ಗೆ 57 ರನ್ ಸೇರಿಸಿ ತಂಡವನ್ನು 200ರ ಗಡಿ ದಾಟಿಸಿದರು. ಮುಂಬೈ 30 ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ಆದರೆ ಪೃಥ್ವಿ ಶಾ ಜೊತೆಗೂಡಿದ ನಾಯಕ ಶ್ರೇಯಸ್ ಅಯ್ಯರ್ ಎರಡನೇ ವಿಕೆಟ್‌ಗೆ 82 ರನ್‌ ಸೇರಿಸಿದರು. ಅವರು ಔಟಾದ ನಂತರ ಪೃಥ್ವಿ ಮತ್ತು ಸೂರ್ಯಕುಮಾರ್ 93 ರನ್‌ಗಳ ಜೊತೆಯಾಟ ಆಡಿದರು. ಕೊನೆಯಲ್ಲಿ ಶಿವಂ ದುಬೆ ದಿಟ್ಟ ಆಟ ಆಡಿದರು. ಇದೇ ಗುಂಪಿನ ಇತರ ಪಂದ್ಯಗಳಲ್ಲಿ ಪುದುಚೇರಿಯನ್ನು ರಾಜಸ್ಥಾನ ಆರು ವಿಕೆಟ್‌ಗಳಿಂದ ಸೋಲಿಸಿತು. ಪುದುಚೇರಿ ಪರ ಪಾರಸ್ ದೋಗ್ರ (101; 109 ಎ, 7 ಬೌಂ, 3 ಸಿ) ಮತ್ತು ರಾಜಸ್ಥಾನಕ್ಕಾಗಿ ಮಹೇಂದರ್ ಸಿಂಗ್ (115; 144 ಎ, 10 ಬೌಂ, 2 ಸಿ) ಶತಕ ಗಳಿಸಿದರು. ಋತುರಾಜ್ ಗಾಯಕವಾಡ್ (102; 109 ಎ, 9 ಬೌಂ, 3 ಸಿ) ಅವರ ಶತಕದ ಬಲದಿಂದ ಮಹಾರಾಷ್ಟ್ರ 59 ರನ್‌ಗಳಿಂದಹಿಮಾಚಲಪ್ರದೇಶವನ್ನು ಮಣಿಸಿತು. ಸಂಕ್ಷಿಪ್ತ ಸ್ಕೋರು: ದೆಹಲಿ: 50 ಓವರ್‌ಗಳಲ್ಲಿ 7ಕ್ಕೆ 211 (ಹಿಮ್ಮತ್ ಸಿಂಗ್ ಔಟಾಗದೆ 106, ಶಿವಾಂಕ್ ವಸಿಷ್ಠ್‌ 55; ಧವಳ್ ಕುಲಕರ್ಣಿ 35ಕ್ಕೆ3, ಶಂಸ್ ಮುಲಾನಿ 33ಕ್ಕೆ2); ಮುಂಬೈ: 31.5 ಓವರ್‌ಗಳಲ್ಲಿ 3ಕ್ಕೆ 216 (ಪೃಥ್ವಿ ಶಾ ಔಟಾಗದೆ 105, ಶ್ರೇಯಸ್ ಅಯ್ಯರ್ 39, ಸೂರ್ಯಕುಮಾರ್ ಯಾದವ್ 50, ಶಿವಂ ದುಬೆ ಔಟಾಗದೆ 9; ಲಲಿತ್ ಯಾದವ್ 32ಕ್ಕೆ2). ಕೆ.ಎಲ್‌.ಸೈನಿ ಕ್ರೀಡಾಂಗಣ: ಮಹಾರಾಷ್ಟ್ರ: 50 ಓವರ್‌ಗಳಲ್ಲಿ 8ಕ್ಕೆ295 (ಋತುರಾಜ್ ಗಾಯಕವಾಡ್ 102, ಯಶ್ ನಹರ್‌ 52; ವೈಭವ್ ಅರೋರ 45ಕ್ಕೆ4, ಆಯುಷ್ ಜಮ್ವಾಲ್ 49ಕ್ಕೆ2); ಹಿಮಾಚಲಪ್ರದೇಶ:48.3 ಓವರ್‌ಗಳಲ್ಲಿ 236 (ಅಭಿಮನ್ಯು ರಾಣಾ 46, ಅಮಿತ್ ಕುಮಾರ್ 34; ರಾಜ್ಯವರ್ಧನ್‌ 42ಕ್ಕೆ4, ಸತ್ಯಜೀತ್ 46ಕ್ಕೆ2). ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣ: ಪುದುಚೇರಿ: 50 ಓವರ್‌ಗಳಲ್ಲಿ 6ಕ್ಕೆ 273 (ಪಾರಸ್ ದೋಗ್ರ 101, ಶೆಲ್ಡನ್ ಜಾಕ್ಸನ್‌ 55; ಶುಭಂ ಶರ್ಮಾ 34ಕ್ಕೆ2, ರವಿ ಬಿಷ್ನೋಯ್‌ 47ಕ್ಕೆ2); ರಾಜಸ್ಥಾನ: 46.1 ಓವರ್‌ಗಳಲ್ಲಿ 4ಕ್ಕೆ 274 (ಮಹೇಂದರ್ ಸಿಂಗ್ 115, ಆದಿತ್ಯ ಗರ್ಹವಾಲ್ 70; ಆ್ಯಂಟನ್ ಸುಭಿಕ್ಷಣ್‌ 55ಕ್ಕೆ3). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.