ಜಯದ ಸಿಹಿಗಾಗಿ ಸಮರ್ಥ್ ಬಳಗದ ತವಕ ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಆರಂಭದಲ್ಲಿಯೇ ಹಾಲಿ ಚಾಂಪಿಯನ್‌ ಕರ್ನಾಟಕ ತಂಡವು ತೀವ್ರ ಒತ್ತಡಕ್ಕೆ ಸಿಲುಕಿದೆ. ಸಿ. ಗುಂಪಿನ ಮೊದಲ ಪಂದ್ಯದಲ್ಲಿ ಉತ್ತರಪ್ರದೇಶ ಎದುರು ಸೋತಿರುವ ಆರ್. ಸಮರ್ಥ್ ನಾಯಕತ್ವದ ಬಳಗವು ಉಳಿದ ನಾಲ್ಕು ಪಂದ್ಯಗಳಲ್ಲಿ ಜಯಿಸಿದರೆ ಮಾತ್ರ ನಾಕೌಟ್ ಅವಕಾಶದ ಬಾಗಿಲು ತೆರೆಯಬಹುದು. ಇಲ್ಲದಿದ್ದರೆ ಹಾದಿ ಕಡುಕಠಿಣವಾಗಬಹುದು. ಸೋಮವಾರ ಜಸ್ಟ್‌ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯಲಿರುವ ಎರಡನೇ ಸುತ್ತಿನಲ್ಲಿ ಸಮರ್ಥ್ ಪಡೆಯು ಬಿಹಾರ ತಂಡವನ್ನು ಎದುರಿಸಲಿದೆ. ಆಶುತೋಷ್ ಅಮನ್ ನಾಯಕತ್ವದ ಬಿಹಾರ ತಂಡವು ಮೊದಲ ಸುತ್ತಿನಲ್ಲಿ ರೈಲ್ವೆಸ್ ಎದುರು ಸೋತಿತ್ತು. ಕರ್ನಾಟಕಕ್ಕೆ ಹೋಲಿಸಿದೆರೆ ಬಲಾಢ್ಯ ತಂಡವೇನಲ್ಲ. ಆದರೂ ಆತಿಥೇಯರು ಮೈಮರೆಯುವಂತಿಲ್ಲ. ಸಮರ್ಥ್ ತಮ್ಮ ಬ್ಯಾಟಿಂಗ್ ಲಯ ಕಂಡುಕೊಂಡರೆ ತಂಡಕ್ಕೆ ಉತ್ತಮ ಆರಂಭ ಲಭಿಸಬಹುದು. ದೇವದತ್ತ ಪಡಿಕ್ಕಲ್ ಮತ್ತು ಅನಿರುದ್ಧ ಜೋಶಿ ತಮ್ಮ ಬೀಸಾಟವನ್ನು ಮುಂದುವರಿಸುವ ಭರವಸೆ ಇದೆ. ಕೆ.ವಿ. ಸಿದ್ಧಾರ್ಥ್ ಮತ್ತು ಕರುಣ್ ನಾಯರ್ ಇನ್ನೂ ತಮ್ಮ ನೈಜ ಆಟಕ್ಕೆ ಕುದುರಬೇಕು. ದೊಡ್ಡ ಮೊತ್ತದ ಸ್ಕೋರ್ ಗಳಿಸಿದರೆ ಅವರಿಗೂ ಮತ್ತು ತಂಡಕ್ಕೆ ಲಾಭ. ಶ್ರೇಯಸ್ ಗೋಪಾಲ್ ಉತ್ತಮ ಬೌಲಿಂಗ್ ಮಾಡಿದ್ದರು. ಆದರೆ ಬ್ಯಾಟಿಂಗ್‌ನಲ್ಲಿ ತಮ್ಮ ಲಯಕ್ಕೆ ಮರಳಬೇಕು. ಬಿ.ಆರ್.ಶರತ್ ಕೆಳಮಧ್ಯಮ ಕ್ರಮಾಂಕಕ್ಕೆ ಬಲ ತುಂಬಬೇಕಿದೆ. ಬಿಹಾರ ತಂಡದ ಆಲ್‌ರೌಂಡರ್‌ಗಳಾದ ಅನುಜ್ ರಾಜ್ ಮತ್ತು ಶಬ್ಬೀರ್ ಖಾನ್ ಅವರಿಬ್ಬರೇ ಕಳೆದ ಪಂದ್ಯದಲ್ಲಿ ಮಿಂಚಿದ್ದರು. ಉಳಿದಂತೆ ಅವರ ಬೌಲಿಂಗ್‌ ಪಡೆಯ ಸಾಧನೆ ಅಷ್ಟಕ್ಕಷ್ಟೆ. ಆದ್ದರಿಂದ ದೊಡ್ಡ ಅಂತರದ ಜಯ ಸಾಧಿಸಲು ಕರ್ನಾಟಕಕ್ಕೆ ಒಳ್ಳೆಯ ಅವಕಾಶ ಇಲ್ಲಿದೆ. ತಂಡಗಳು: ಕರ್ನಾಟಕ: ಆರ್. ಸಮರ್ಥ್ (ನಾಯಕ), ಬಿ.ಆರ್. ಶರತ್ (ವಿಕೆಟ್‌ಕೀಪರ್), ದೇವದತ್ತ ಪಡಿಕ್ಕಲ್, ಕೆ.ವಿ. ಸಿದ್ಧಾರ್ಥ್, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಅನಿರುದ್ಧ ಜೋಶಿ, ಜೆ . ಸುಚಿತ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಪ್ರಸಿದ್ಧಕೃಷ್ಣ, ಡಿ. ನಿಶ್ಚಲ್, ರೋಹನ್ ಕದಂ, ವೈಶಾಖ ವಿಜಯಕುಮಾರ್, ಆದಿತ್ಯ ಸೋಮಣ್ಣ, ಎಂ.ಬಿ ದರ್ಶನ್, ನಿಕಿನ್ ಜೋಸ್, ಎಸ್. ರಕ್ಷಿತ್, ಕೆ.ಎಲ್. ಶ್ರೀಜಿತ್, ಮನೋಜ್ ಭಾಂಡಗೆ, ಶುಭಾಂಗ್ ಹೆಗಡೆ. ಬಿಹಾರ: ಆಶುತೋಷ್ ಅಮನ್ (ನಾಯಕ), ವಿಕಾಸ್ ಯಾದವ್ (ವಿಕೆಟ್‌ಕೀಪರ್), ಎಸ್. ಗಣಿ, ಶಶೀಮ್ ರಾಥೋಡ್, ಬಾಬುಲ್ ಕುಮಾರ್, ಆಕಾಶರಾಜ್, ಶಬ್ಬೀರ್ ಖಾನ್, ಅನುಜ್ ರಾಜ್, ಸಮರ್ ಖಾದ್ರಿ, ರಾಹುಲ್ ಕುಮಾರ್, ವಿಕಾಸ್ ರಂಜನ್, ವಿಶಾಶ್ ಪಟೇಲ್, ಶಶಿ ಆನಂದ್, ರಿಶವ್ ರಾಜ್, ಸೂರಜ್ ಕಶ್ಯಪ್. ಸಿ ಗುಂಪಿನ ಪಂದ್ಯಗಳು ರೈಲ್ವೆಸ್–ಒಡಿಶಾ (ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ) ಕೇರಳ–ಉತ್ತರಪ್ರದೇಶ (ಕೆಎಸ್‌ಸಿಎ ಕ್ರೀಡಾಂಗಣ, ಆಲೂರು) ಪಂದ್ಯಗಳ ಆರಂಭ: ಬೆಳಿಗ್ಗೆ 9 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.