ತವರು ದೇಶಗಳಿಗೆ ಪಿಚ್‌ ಆಯ್ಕೆಯ ಹಕ್ಕು ಇದೆ: ರೋಹಿತ್ ತಿರುಗೇಟು ಅಹಮದಾಬಾದ್: ಚೆನ್ನೈನ ಚೆಪಾಕ್ ಕ್ರೀಡಾಂಗಣದ ಪಿಚ್‌ ಉತ್ತಮ ಗುಣಮಟ್ಟದ್ದಾಗಿರಲಿಲ್ಲ ಎಂದು ಟೀಕಿಸಿದ್ದ ಇಂಗ್ಲೆಂಡ್‌ನ ಮಾಜಿ ಆಟಗಾರರಿಗೆ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ತಿರುಗೇಟು ನೀಡಿದ್ದಾರೆ. ’ಭಾರತ ತಂಡವು ಬೇರೆ ದೇಶಗಳಿಗೆ ಪ್ರವಾಸ ಮಾಡಿದಾಗ ಈ ರೀತಿಯಾಗಿ ಪಿಚ್‌ಗಳ ಕುರಿತು ಎಂದೂ ದೂರಿಲ್ಲ. ಎಷ್ಟೇ ಕಠಿಣ ಸವಾಲುಗಳಿದ್ದರೂ ಎದುರಿಸಿ ಆಡಿದ್ದೇವೆ. ಆದರೆ ಭಾರತದಲ್ಲಿ ಮೊದಲಿನಿಂದಲೂ ಸ್ಪಿನ್ ಸ್ನೇಹಿ ಪಿಚ್‌ಗಳು ಇರುವುದು ಸಾಮಾನ್ಯ. ಆದರೂ ಇವತ್ತಿಗೂ ವಿದೇಶಿ ಆಟಗಾರರು ಟೀಕಿಸುತ್ತಾರೆ. ಇದು ಸರಿಯಲ್ಲ. ಆತಿಥೇಯ ತಂಡಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಪಿಚ್‌ ಸಿದ್ಧಪಡಿಸಿಕೊಳ್ಳುವ ಹಕ್ಕು ಇದೆ‘ ಎಂದು ರೋಹಿತ್ ಭಾನುವಾರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ಧಾರೆ. ಚೆಪಾಕ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್‌ಗಳು ನಡೆದಿದ್ದವು. ಮೊದಲನೇಯದ್ದರಲ್ಲಿ ಇಂಗ್ಲೆಂಡ್ ಜಯಿಸಿತ್ತು. ಎರಡನೇ ಪಂದ್ಯದಲ್ಲಿ ಭಾರತ ಗೆದ್ದಿತ್ತು. ನಾಲ್ಕು ಪಂದ್ಯಗಳ ಸರಣಿ 1–1ರಸಮಬಲವಾಗಿದೆ. ಇನ್ನೆರಡು ಪಂದ್ಯಗಳು ಅಹಮದಾಬಾದಿನ ಮೊಟೇರಾದಲ್ಲಿರುವ ಸರ್ದಾರ್ ವಲಭಭಾಯಿ ಪಟೇಲ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಚೆನ್ನೈ ಪಂದ್ಯಗಳ ಸಂದರ್ಭದಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಮತ್ತು ಆಸ್ಟ್ರೇಲಿಯಾದ ಮಾಜಿ ಆಟಗಾರ ಮಾರ್ಕ್ ವಾ ಪಿಚ್ ಕುರಿತು ಟೀಕಿಸಿದ್ದರು. ’ಕಣದಲ್ಲಿ ಪೈಪೋಟಿ ನಡೆಸುವ ಎರಡೂ ತಂಡಗಳಿಗೆ ಅದೇ ಪಿಚ್‌ ಇರುತ್ತದೆ. ಇಬ್ಬರಿಗೂ ಸಮಾನ ಅವಕಾಶಗಳಿರುತ್ತವೆ. ಆದರೂ ಈ ಟೀಕೆಗಳು ಯಾಕೆ. ಅಷ್ಟೇ ತಕರಾರು ಇದ್ದರೆ ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್)ಗೆ ದೂರು ನೀಡಿ. ಎಲ್ಲ ದೇಶಗಳಲ್ಲಿಯೂ ತಟಸ್ಥ ಪಿಚ್‌ಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಲಿ‘ ಎಂದು ರೋಹಿತ್ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.