ಸಂಕಲ್ಪ ಶತಕ; ಫೈನಲ್‌ಗೆ ಬಿಡಿಕೆ ಹುಬ್ಬಳ್ಳಿ: ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸಂಕಲ್ಪ ತೆಗ್ಗಿಹಳ್ಳಿ (124, 145ಎಸೆತ, 11 ಬೌಂಡರಿ, 3 ಸಿಕ್ಸರ್‌) ಶತಕದ ಬಲದಿಂದ ಸವಾಲಿನ ಮೊತ್ತ ಕಲೆಹಾಕಿದ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ತಂಡ 169 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ‘ಪಿಆರ್‌ಎನ್‌’ ಟ್ರೋಫಿ ಅಂತರ ಕ್ಯಾಂಪ್‌ಗಳ ಆಹ್ವಾನಿತ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ. ಜಿಮ್ಖಾನಾ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಿಡಿಕೆ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್‌ ನಷ್ಟಕ್ಕೆ 292 ರನ್‌ ಕಲೆಹಾಕಿತು. ಇದು ಈ ಟೂರ್ನಿಯಲ್ಲಿ ದಾಖಲಾದ ತಂಡವೊಂದರ ಗರಿಷ್ಠ ಮೊತ್ತವೂ ಆಯಿತು. ಎದುರಾಳಿ ಧಾರವಾಡದ ವಸಂತ ಮುರ್ಡೇಶ್ವರ ಕ್ರಿಕೆಟ್ ಅಕಾಡೆಮಿ 43.3 ಓವರ್‌ಗಳಲ್ಲಿ 123 ರನ್‌ ಕಲೆಹಾಕಿ ತನ್ನ ಹೋರಾಟ ಮುಗಿಸಿತು. ಇದೇ ಮೈದಾನದಲ್ಲಿ ಭಾನುವಾರ ಬೆಳಿಗ್ಗೆ 9.30ಕ್ಕೆ ನಡೆಯುವ ಫೈನಲ್‌ ಪಂದ್ಯದಲ್ಲಿ ಬಿಡಿಕೆ ಹಾಗೂ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ (ಎಚ್‌ಸಿಎ) ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಸೆಮಿಫೈನಲ್‌ನಲ್ಲಿ ಎಚ್‌ಸಿಎ ತಂಡ ಹುಬ್ಬಳ್ಳಿ ಕೋಲ್ಟ್ಸ್‌ ವಿರುದ್ಧ ಗೆಲುವು ಸಾಧಿಸಿತ್ತು. ಪುಟಿದೆದ್ದ ಬಿಡಿಕೆ: ಬಿಡಿಕೆ ತಂಡ ಆರಂಭದಲ್ಲಿಯೇ ವಿಕೆಟ್‌ ಕಳೆದುಕೊಂಡ ಕಾರಣ ಸಂಕಷ್ಟಕ್ಕೆ ಸಿಲುಕಿತ್ತು. 8.4 ಓವರ್‌ಗಳಲ್ಲಿ 33 ರನ್‌ಗೆ ಮೂರು ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ನಾಲ್ಕನೇ ವಿಕೆಟ್‌ಗೆ ಜೊತೆಯಾದ ಸಂಕಲ್ಪ ಮತ್ತು ನಾಯಕ ವೃಷಭ ಪಾಟೀಲ (75, 80ಎಸೆತ, 7ಬೌಂಡರಿ, 1 ಸಿಕ್ಸರ್‌) 167 ರನ್‌ ಕಲೆಹಾಕಿದರು. ಸಂಕಲ್ಪ 40 ಓವರ್‌ಗಳ ತನಕ ಕ್ರೀಸ್‌ನಲ್ಲಿ ಇದ್ದದ್ದು ವಿಶೇಷ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.