ರಿಂಕು ಸಿಂಗ್ ಮಿಂಚು:‘ ಕರ್ನಾಟಕಕ್ಕೆ ಆಘಾತ ಬೆಂಗಳೂರು:ಉತ್ತರ ಪ್ರದೇಶದ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಶನಿವಾರ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಚಾಂಪಿಯನ್ ಕರ್ನಾಟಕ ತಂಡಕ್ಕೆ ಆಘಾತ ನೀಡಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಿ ಗುಂಪಿನ ಮೊದಲ ಪಂದ್ಯದಲ್ಲಿ ಆರ್. ಸಮರ್ಥ್ ನಾಯಕತ್ವದ ಕರ್ನಾಟಕ ತಂಡವು 9 ರನ್‌ಗಳಿಂದ ಸೋತಿತು. ಟಾಸ್ ಗೆದ್ದ ಉತ್ತರಪ್ರದೇಶ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ದೇವದತ್ತ ಪಡಿಕ್ಕಲ್ (52; 84ಎ, 7ಬೌಂಡರಿ) ಮತ್ತು ಅನಿರುದ್ಧ ಜೋಶಿ (68; 48ಎ, 4ಬೌಂ, 4ಸಿ) ಅವರ ಅರ್ಧಶತಕಗಳ ಬಲದಿಂದ ಕರ್ನಾಟಕವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 246 ರನ್ ಗಳಿಸಿತು. ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮನ್ ರಿಂಕು ಸಿಂಗ್ (ಅಜೇಯ 62, 61ಎ, 7ಬೌಂ, 1ಸಿ) ತಂಡದ ಜಯವನ್ನು ಸುಲಭಗೊಳಿಸಿದರು. ಉತ್ತರಪ್ರದೇಶವು 45.2 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 215 ರನ್ ಗಳಿಸಿತು. ಈ ಸಂದರ್ಭದಲ್ಲಿ ಮಳೆ ಸುರಿದ ಕಾರಣ ವಿ.ಜಯದೇವನ್ ನಿಯಮದನ್ವಯ ಗುರಿ ಪರಿಷ್ಕರಿಸಲಾಯಿತು. ಅದರಿಂದಾಗಿ ಗೆಲುವಿನ ಗುರಿಯು 207 ರನ್‌ಗಳಿಗೆ ನಿಗದಿಯಾಯಿತು. ಉತ್ತರಪ್ರದೇಶ ವಿಜಯಿಯಾಯಿತು. ಉತ್ತರಪ್ರದೇಶ ತಂಡಕ್ಕೆ ಅಭಿಷೇಕ್ ಗೋಸ್ವಾಮಿ (54; 67ಎ, 3ಬೌಂ, 2ಸಿ) ಮತ್ತು ಕರಣ್ ಶರ್ಮಾ (40; 74ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 102 ರನ್ ಸೇರಿಸಿ ಭದ್ರಬುನಾದಿ ಹಾಕಿದ್ದರಿಂದ ಗೆಲುವು ಸುಲಭವಾಯಿತು. ಸ್ಪಿನ್ನರ್‌ಗಳ ಪ್ರಯತ್ನ: ಅಭಿಷೇಕ್ ವಿಕೆಟ್ ಗಳಿಸಿದ ಎಡಗೈ ಸ್ಪಿನ್ನರ್ ಜೆ.ಸುಚಿತ್ 24ನೇ ಓವರ್‌ನಲ್ಲಿ ಜೊತೆಯಾಟವನ್ನು ಮುರಿದರು. ಅದೇ ಓವರ್‌ನಲ್ಲಿ ಕರಣ್ ರನ್‌ಔಟ್ ಆಗಲು ದೇವದತ್ತ ಚುರುಕಿನ ಫೀಲ್ಡಿಂಗ್ ಕಾರಣವಾಯಿತು. ಈ ಹಂತದಲ್ಲಿ ರನ್‌ ಗಳಿಕೆಗೆ ಕಡಿವಾಣ ಹಾಕುವ ಪ್ರಯತ್ನವನ್ನು ಆತಿಥೇಯ ಬೌಲರ್‌ಗಳು ಮಾಡಿದರು. 28ನೇ ಓವರ್‌ನಲ್ಲಿ ಪ್ರಿಯಂ ಗರ್ಗ್ ವಿಕೆಟ್‌ ಅನ್ನು ಶ್ರೇಯಸ್ ಗೋಪಾಲ್ ಉರುಳಿಸಿದರು. ಸಾಂದರ್ಭಿಕ ಬೌಲರ್ ಕರುಣ್ ನಾಯರ್ ಬೌಲಿಂಗ್‌ನಲ್ಲಿ ಆಕಾಶದೀಪ್ ನಾಥ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಈ ವೇಳೆ ಕ್ರೀಸ್‌ಗೆ ಬಂದ ರಿಂಕು ಸಿಂಗ್ ಉತ್ತರಪ್ರದೇಶದ ಆತಂಕವನ್ನು ದೂರ ಮಾಡಿದರು. ಬಿರುಸಿನ ಬ್ಯಾಟಿಂಗ್ ಮಾಡಿ ಬೌಲರ್‌ಗಳನ್ನು ದಂಡಿಸಿದರು. ಅವರಿಗೆ ಉಪೇಂದ್ರ ಯಾದವ್ (ಔಟಾಗದೆ 26) ಉತ್ತಮ ಜೊತೆ ನೀಡಿದರು. ಆದರೆ, ಆತಿಥೇಯ ತಂಡದ ಮಧ್ಯಮವೇಗಿಗಳು ವಿಕೆಟ್ ಗಳಿಸುವಲ್ಲಿ ವಿಫಲರಾದರು. ಅನಿರುದ್ಧ ಮಿಂಚು: ಸಾಧಾರಣ ಮೊತ್ತಕ್ಕೆ ಕುಸಿಯುವ ಆತಂಕ ಎದುರಿಸಿದ್ದ ಕರ್ನಾಟಕ ತಂಡಕ್ಕೆ ಗದುಗಿನ ಅನಿರುದ್ಧ ಜೋಶಿ ಮರುಜೀವ ತುಂಬಿದರು. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಸಮರ್ಥ್ ಮೂರು ರನ್ ಮಾತ್ರ ಗಳಿಸಿ ಔಟಾದರು. ದೇವದತ್ತ ಮತ್ತು ಕೆ.ವಿ. ಸಿದ್ಧಾರ್ಥ್ (38) ತಾಳ್ಮೆಯಿಂದ ಆಡಿದರು. ಭಾರತ ತಂಡದ ಮಧ್ಯಮವೇಗಿ ಭುವನೇಶ್ವರ್ ಕುಮಾರ್ ನೇತೃತ್ವದ ಉತ್ತರಪ್ರದೇಶದ ಬೌಲರ್‌ಗಳ ದಾಳಿಯು ಉತ್ತಮವಾಗಿತ್ತು. ಎಚ್ಚರಿಕೆಯಿಂದ ಆಡಿದ ದೇವದತ್ತ ಮತ್ತು ಸಿದ್ಧಾರ್ಥ್ ಎರಡನೇ ವಿಕೆಟ್‌ಗೆ 82 ರನ್ ಕಲೆಹಾಕಿದರು. ದೇವದತ್ತ ಔಟಾದ ನಂತರ ಕರುಣ್ ನಾಯರ್ 33 ರನ್ ಗಳಿಸಿದರು. ಶ್ರೇಯಸ್ ಗೋಪಾಲ್ ಒಂದು ರನ್ ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಜೋಶಿ ಬ್ಯಾಟ್ ಬೀಸಿದರು. ನಾಲ್ಕು ಸಿಕ್ಸರ್‌ಗಳನ್ನೂ ಸಿಡಿಸಿದರು. 141.67ರ ಸ್ಟ್ರೈಕ್‌ರೇಟ್‌ನಲ್ಲಿ ಅರ್ಧಶತಕದ ಗಡಿ ದಾಟಿದರು. ಅಭಿಮನ್ಯು ಮಿಥುನ್ ಆರು ಎಸೆತಗಳಲ್ಲಿ 17 ರನ್‌ ಗಳಿಸಿದರು. ಎರಡು ಭರ್ಜರಿ ಸಿಕ್ಸರ್‌ಗಳನ್ನೂ ಸಿಡಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.