ಡಬಲ್‌ ಗುಂಡಿಗೆ ಬೇಡುವ ಡೌನ್‌ಹಿಲ್‌ ಗದಗ: ಎರಡು ದಿನಗಳ ಕಾಲ ಇಲ್ಲಿನ ಬಿಂಕದಕಟ್ಟಿ ಎಂಟಿಬಿ ಟ್ರ್ಯಾಕ್‌ನಲ್ಲಿ ನಡೆದ ಸೈಕ್ಲಿಂಗ್‌ ಸೊಗಸನ್ನು ಆಸ್ವಾದಿಸಿದ್ದ ಸೈಕ್ಲಿಂಗ್‌ ಪ್ರಿಯರು, ಭಾನುವಾರ ನಡೆಯುವ ಡೌನ್‌ಹಿಲ್‌ ಸೈಕ್ಲಿಂಗ್‌ ಸ್ಪರ್ಧೆಯ ರೋಚಕ ಕ್ಷಣಗಳನ್ನು ಎದೆಗಿಳಿಸಿಕೊಳ್ಳಲು ಸಜ್ಜಾಗಿದ್ದಾರೆ. ಡೌನ್‌ಹಿಲ್‌ ಸೈಕ್ಲಿಂಗ್‌ ಸ್ಪರ್ಧೆಯು ಕಡು ಕಠಿಣವಾಗಿರುವ 500 ಮೀಟರ್‌ ಟ್ರ್ಯಾಕ್‌ನಲ್ಲಿ ನಡೆಯಲಿದೆ. ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿರುವ ಗುಡ್ಡದ ಇಳಿಜಾರಿನಲ್ಲಿ ಟ್ರ್ಯಾಕ್‌ ಸಜ್ಜುಗೊಂಡಿದ್ದು, ವಿವಿಧ ರಾಜ್ಯಗಳ 25 ಸೈಕ್ಲಿಸ್ಟ್‌ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸೈಕ್ಲಿಸ್ಟ್‌ಗಳಿಗೆ ಡಬಲ್ ಗುಂಡಿಗೆ ಇರಬೇಕು ಎಂಬುದು ವಿಶ್ಲೇಷಕರ ವ್ಯಾಖ್ಯಾನ. ‘ಡೌನ್‌ಹಿಲ್‌ ಸ್ಪರ್ಧೆಯಲ್ಲಿ ಭಾಗವಹಿಸುವವರೆಲ್ಲರೂ ವೃತ್ತಿಪರ ಸೈಕ್ಲಿಸ್ಟ್‌. ಕರ್ನಾಟಕ, ಮಣಿಪುರ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಸ್ಪರ್ಧಿಗಳು ಕಣದಲ್ಲಿದ್ದಾರೆ. 500 ಮೀಟರ್‌ ಟ್ರ್ಯಾಕ್‌ ಎಂದು ಲಘುವಾಗಿ ಪರಿಗಣಿಸುವಂತಿಲ್ಲ. ಸೈಕ್ಲಿಸ್ಟ್‌ಗಳು ಬೆಟ್ಟದ ಮೇಲಿಂದ ನೇರವಾಗಿ ಕೆಳಕ್ಕೆ ಬರುತ್ತಾರೆ. ಟ್ರ್ಯಾಕ್‌ ಮಧ್ಯೆ ಮೂರು ಜಂಪಿಂಗ್‌ ರ‍್ಯಾಂಪ್‌ ಇಟ್ಟಿದ್ದೇವೆ. ಸೈಕ್ಲಿಸ್ಟ್‌ಗಳು 50ರಿಂದ 60 ಕಿ.ಮೀ. ವೇಗದಲ್ಲಿ ಬಂದು ರ‍್ಯಾಂಪ್‌ನಿಂದ ಸೈಕಲ್‌ ಹಾರಿಸುತ್ತಾರೆ. ಈ ಸ್ಥಳದಲ್ಲಿ ನೋಡಲು ಅದ್ಭುತ ದೃಶ್ಯಗಳು ಸಿಗುತ್ತವೆ’ ಎಂದು ಹೇಳಿದರು ಟ್ರ್ಯಾಕ್‌ ಪರಿಣತ ಸುನೀಲ್‌ ನಂಜಪ್ಪ. ಡೌನ್‌ಹಿಲ್‌ ಸ್ಪರ್ಧೆಗೆ ನೋಂದಾಯಿಸಿರುವ ಸೈಕ್ಲಿಸ್ಟ್‌ಗಳು ಶನಿವಾರ ಅಭ್ಯಾಸ ನಡೆಸುತ್ತಿದ್ದರು. ಆರಂಭದ ಸ್ಥಳದಿಂದ ಹೊರಟು ಎಲ್ಲ ಜಂಪ್‌ಗಳನ್ನು ಮಾಡಿಕೊಂಡು ಸ್ಪರ್ಧಿಗಳು ಕೇವಲ 45ರಿಂದ 50 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುತ್ತಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.