ನ್ಯೂಜಿಲೆಂಡ್‌ಗೆ ಜಯ ತಂದಿತ್ತ ಕಾನ್ವೆ ಕ್ರೈಸ್ಟ್‌ಚರ್ಚ್‌: ಭರ್ಜರಿ ಬ್ಯಾಟಿಂಗ್ ಮಾಡಿದ ಡೆವೊನ್ ಕಾನ್ವೆ (ಔಟಾಗದೆ 99, 59 ಎಸೆತ) ನ್ಯೂಜಿಲೆಂಡ್ ತಂಡದ ಜಯಕ್ಕೆ ಕಾರಣವಾದರು. ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆದ ಮೊದಲ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ಆತಿಥೇಯ ತಂಡವು 53 ರನ್‌ಗಳ ಗೆಲುವು ಸಾಧಿಸಿತು. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್‌ 5 ವಿಕೆಟ್‌ಗೆ 184 ರನ್ ಕಲೆಹಾಕಿತು. ಉತ್ತರವಾಗಿ ಪ್ರವಾಸಿ ತಂಡ 17.3 ಓವರ್‌ಗಳಲ್ಲಿ 131 ರನ್‌ಗಳಿಗೆ ಎಲ್ಲ ವಿಕೆಟ್ ಒಪ್ಪಿಸಿತು. ತಂಡವು 11 ರನ್‌ಗೆ ಎರಡು ವಿಕೆಟ್ ಕಳೆದುಕೊಂಡ ವೇಳೆ ಕ್ರೀಸ್‌ಗಿಳಿದ ದಕ್ಷಿಣ ಆಫ್ರಿಕಾ ಸಂಜಾತ ಕಾನ್ವೆ, 10 ಬೌಂಡರಿ ಮೂರು ಸಿಕ್ಸರ್ ಸಿಡಿಸಿ ಅಜೇಯರಾಗುಳಿದರು. ನ್ಯೂಜಿಲೆಂಡ್‌ ಇನಿಂಗ್ಸ್‌ನ ಕೊನೆಯ ಓವರ್‌ ಇರುವಾಗ ಕಾನ್ವೆ ವೈಯಕ್ತಿಕ ಮೊತ್ತ 87 ರನ್‌ ಆಗಿತ್ತು. ಸ್ಟ್ರೈಕ್‌ನಲ್ಲಿದ್ದ ಅವರು ಒಂದು ಸಿಂಗಲ್‌, ಒಂದು ಸಿಕ್ಸರ್‌ ಮತ್ತು ಒಂದು ಬೌಂಡರಿ ಸಿಡಿಸಿದರು. ಶತಕ ಪೂರೈಸಲು ಕೊನೆಯ ಎಸೆತದಲ್ಲಿ ಎರಡು ರನ್ ಬೇಕಿತ್ತು. ಆದರೆ ಒಂದು ರನ್ ಮಾತ್ರ ಗಳಿಸಿ, ಮೊದಲ ಶತಕದ ಅವಕಾಶವನ್ನು ತಪ್ಪಿಸಿಕೊಂಡರು. ಕಾನ್ವೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಗ್ಲೆನ್ ಫಿಲಿಪ್ (30) ಜೊತೆ 74, ಐದನೇ ವಿಕೆಟ್‌ಗೆ ಜಿಮ್ಮಿ ನೀಶಾಮ್ (26) ಅವರೊಂದಿಗೆ 47 ಹಾಗೂ ಮುರಿಯದ ಆರನೇ ವಿಕೆಟ್‌ಗೆ ಮಿಚೆಲ್ ಸ್ಯಾಂಟನರ್ ಜೊತೆಗೂಡಿ 44 ರನ್‌ ಸೇರಿಸಿದರು. ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಸ್ಪಿನ್ನರ್‌ ಇಶ್ ಸೋಧಿ (28ಕ್ಕೆ 4), ವೇಗಿಗಳಾದ ಟಿಮ್ ಸೌಥಿ (10ಕ್ಕೆ 2) ಹಾಗೂ ಟ್ರೆಂಟ್‌ ಬೌಲ್ಟ್ (22ಕ್ಕೆ 2) ನ್ಯೂಜಿಲೆಂಡ್ ಜಯಕ್ಕೆ ಕಾಣಿಕೆ ನೀಡಿದರು. ಪ್ರವಾಸಿ ತಂಡದ ಪರ ಗರಿಷ್ಠ ಮೊತ್ತ ಗಳಿಸಿದ್ದು ಮಿಚೆಲ್ ಮಾರ್ಷ್‌ (45). ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 184 (ಡೆವೊನ್ ಕಾನ್ವೆ ಔಟಾಗದೆ 99, ಗ್ಲೆನ್ ಫಿಲಿಪ್‌ 30, ಜಿಮ್ಮಿ ನೀಶಾಮ್‌ 26; ಜೇ ರಿಚರ್ಡ್ಸನ್‌ 31ಕ್ಕೆ 2, ಡ್ಯಾನಿಯಲ್ ಸ್ಯಾಮ್ಸ್ 40ಕ್ಕೆ 2, ಮಾರ್ಕಸ್ ಸ್ಟೋಯಿನಿಸ್‌ 17ಕ್ಕೆ1). ಆಸ್ಟ್ರೇಲಿಯಾ: 17.3 ಓವರ್‌ಗಳಲ್ಲಿ 131 (ಮಿಚೆಲ್ ಮಾರ್ಷ್‌ 45, ಆ್ಯಶ್ಟನ್ ಅಗರ್ 23, ಆ್ಯಡಂ ಜಂಪಾ ಔಟಾಗದೆ 13; ಇಶ್ ಸೋಧಿ 28ಕ್ಕೆ 4, ಟಿಮ್ ಸೌಥಿ 10ಕ್ಕೆ 2, ಟ್ರೆಂಟ್ ಬೌಲ್ಟ್ 22ಕ್ಕೆ 2, ಮಿಚೆಲ್ ಸ್ಯಾಂಟನರ್‌ 29ಕ್ಕೆ 1). ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 53 ರನ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.