30ನೇ ಬಾರಿ 5 ವಿಕೆಟ್ ಗೊಂಚಲು ಪಡೆದ ಆರ್.ಅಶ್ವಿನ್ ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ 5 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಸ್ಪಿನ್ನರ್ ಆರ್.ಅಶ್ವಿನ್ 30 ಬಾರಿ ಆ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು. ಇದರೊಂದಿಗೆ ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್ಸನ್ ದಾಖಲೆ ಸರಿಗಟ್ಟಿದರು. ಆ್ಯಂಡರ್ಸನ್ ಅವರಿಗೆ 160 ಪಂದ್ಯಗಳು ಬೇಕಾಗಿದ್ದರೆ ಅಶ್ವಿನ್ 78 ಪಂದ್ಯಗಳಲ್ಲಿ ಸಾಧನೆ ಮಾಡಿದರು. ಓದಿ:ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಟೀಂ ಇಂಡಿಯಾ, ನ್ಯೂಜಿಲೆಂಡ್ ಎದುರಾಳಿ ಭಾರತ ತಂಡದಲ್ಲಿ ಅನಿಲ್ ಕುಂಬ್ಳೆ ಅವರು 35 ಬಾರಿ 5 ವಿಕೆಟ್ ಕಬಳಿಸಿದ್ದಾರೆ ಹಾಗೂ ಅತಿಹೆಚ್ಚು ಬಾರಿ 5 ವಿಕೆಟ್ ಗಳಿಸಿದ ವಿಶ್ವದ ಬೌಲರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ ಈಗ ಆರನೇ ಸ್ಥಾನದಲ್ಲಿದ್ದಾರೆ. ಭಾರತದ ಪರ ಹರಭಜನ್ ಸಿಂಗ್ 25 ಬಾರಿ ಹಾಗೂ ಕಪಿಲ್ ದೇವ್ 23 ಬಾರಿ 5 ವಿಕೆಟ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಒಟ್ಟು 32 ವಿಕೆಟ್ ಗಳಿಸಿರುವ ಅಶ್ವಿನ್ 189 ರನ್‌ಗಳನ್ನೂ ಗಳಿಸಿದ್ದಾರೆ. ಈ ಪೈಕಿ ಚೆನ್ನೈನಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸಿದ ಶತಕವೂ ಸೇರಿದೆ. ಟೆಸ್ಟ್‌ ಸರಣಿಯಲ್ಲಿ ಎರಡು ಬಾರಿ 30ಕ್ಕೂ ಹೆಚ್ಚು ವಿಕೆಟ್ ಪಡೆದ ಶ್ರೇಯಸ್ಸಿಗೂ ಅಶ್ವಿನ್ ಪಾತ್ರರಾಗಿದ್ದಾರೆ. ಈ ಹಿಂದೆ 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು 31 ವಿಕೆಟ್ ಕಬಳಿಸಿದ್ದರು. ಓದಿ: | ಆಂಗ್ಲರನ್ನು ಸೋಲಿಸಿದ ಭಾರತ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆರ್.ಅಶ್ವಿನ್ ಹಾಗೂ ಅಕ್ಷರ್ ಪಟೇಲ್‌ ಸ್ಪಿನ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಇನ್ನಿಂಗ್ಸ್ ಹಾಗೂ 25 ರನ್‌ಗಳ ಅಂತರದಿಂದ ಸೋಲನುಭವಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.